ಎನ್.ಆರ್.ಪುರ: ದೇಶದಲ್ಲಿ ಹಲವು ಧರ್ಮಗಳಿದ್ದು ಎಲ್ಲ ಧರ್ಮಗಳ ಒಂದೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷತೆ ಇದೆ ಎಂದು ಕಸಾಪ ಹೋಬಳಿ ಘಟಕದ ಕಾರ್ಯದರ್ಶಿ ಆರ್.ನಾಗರಾಜ್ ಹೇಳಿದರು.
ಕನ್ನಡಪರ ಹೋರಾಟಗಾರ ಪಿ.ಸಿ.ಮ್ಯಾಥ್ಯು ಅವರ ಮನೆಯಂಗಳದಲ್ಲಿ ಭಾನುವಾರ ತಾಲೂಕು ಕಸಾಪ ಟಿ.ಎಂ.ಪ್ರಸಾದ್ ಹಾಗೂ ದಿ.ನಾಡಿಗ್ ಕೃಷ್ಣಪ್ಪ, ಲಕ್ಷ್ಮೀದೇವಿ ಸ್ವರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಲೆನಾಡ ಹಬ್ಬಗಳು ಹಾಗೂ ಭಾವೈಕ್ಯತೆ ಕುರಿತು ಮಾತನಾಡಿದರು.
ಯಾವುದೇ ಹಬ್ಬವನ್ನು ಪ್ರೀತಿ, ಬಾಂಧವ್ಯದಿಂದ ಆಚರಿಸಿದರೆ ಮಾತ್ರ ಅರ್ಥ ಬರುತ್ತದೆ. ಯಾವುದೇ ಧರ್ಮದ ಹಬ್ಬಗಳೂ ತನ್ನ ಸತ್ವವನ್ನು ಕಳೆದುಕೊಳ್ಳಬಾರದು. ನಮ್ಮ ತಾಲೂಕು ಭಾವೈಕ್ಯತೆಯ ಕೇಂದ್ರವಾಗಿದೆ. ಇಲ್ಲಿ ಹಿಂದು, ಕ್ರೈಸ್ತ, ಮುಸ್ಲಿಂ, ಜೈನ ಎಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ. ಅವರವರ ಧರ್ಮ ಅವರಿಗೆ ದೊಡ್ಡದು ಮತ್ತು ಮಹತ್ವದ್ದಾಗಿದೆ. ನಮ್ಮ ಮಲೆನಾಡಿನ ಹಬ್ಬಗಳು ಸಂಭ್ರಮ, ಸಡಗರದಿಂದ ಕೂಡಿರುತ್ತದೆ. ಪ್ರಕೃತಿಯ ಚಲನವಲನಗಳನ್ನು ಗಮನಿಸಿ ಹಿಂದು ಹಬ್ಬಗಳನ್ನು ಆಚರಿಸುತ್ತೇವೆಂದರು.
ಕಸಾಪ ನಗರ ಘಟಕದ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ನಮ್ಮ ತಾಲೂಕು ಸರ್ವಧರ್ಮದ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲರೂ ಒಂದೇ ಎಂದು ಬಾಳುತ್ತಿದ್ದೇವೆ. ಸ್ವಾತಂತ್ರ ಪೂರ್ವದಿಂದಲೇ ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಕಂಪನ್ನು ಮನೆ ಮನೆಗೆ ಪಸರಿಸುವ ಕಾರ್ಯ ಮಾಡುತ್ತಿದೆ. ಕನ್ನಡ ಉಳಿಸಿ, ಬೆಳೆಸಲು ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ಕಸಾಪ ಕೇವಲ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿಲ್ಲ. ಅದರೊಂದಿಗೆ ಭಾವೈಕ್ಯತೆಯನ್ನೂ ಸಾರುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಸಾಪಕ್ಕೆ ಹೆಚ್ಚು ಸದಸ್ಯರು ಸೇರ್ಪಡೆಯಾಗಬೇಕು. ಈ ಮೂಲಕ ಕನ್ನಡಪರ ಕಾರ್ಯ ಇನ್ನಷ್ಟು ಕೈಗೊಳ್ಳಲು ಪ್ರೇರೇಪಣೆ ದೊರೆಯುತ್ತದೆ. ಇಂದು ಭಾವೈಕ್ಯತೆಯ ಸಂಕೇತವಾಗಿ ಜೈನ, ಕ್ರೈಸ್ತ, ಮುಸ್ಲಿಂ ವರ್ಗದ ಮೂವರು ಶ್ರಮಿಕರನ್ನು ಸನ್ಮಾನಿಸಿ ಕಾರ್ಮಿಕ ಶ್ರೀ ಬಿರುದು ನೀಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶ್ರಮಿಕ ವರ್ಗದವರಾದ ಮಥಾಯಿ, ರಘುಹೆಗ್ಡೆ ಹಾಗೂ ಅಬ್ದುಲ್ ಘನಿ ಅವರನ್ನು ತಾಲೂಕು ಕಸಾಪಯಿಂದ ಕಾರ್ಮಿಕ ಶ್ರೀ ಬಿರುದು ನೀಡಿ ಸನ್ಮಾನಿಸಲಾಯಿತು.
ಸಾಹಿತಿ ಜಯಮ್ಮ, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ತಾಲೂಕು ಕಸಾಪ ಕಾರ್ಯದರ್ಶಿ ಮಂಜಪ್ಪ, ಕನ್ನಡಪರ ಹೋರಾಟಗಾರ ಪಿ.ಸಿ.ಮ್ಯಾಥ್ಯು, ಪಿ.ಕೆ.ಬಸವರಾಜ್, ವಾಸಂತಿ, ಬಿ.ನಂಜುಂಡಪ್ಪ ಮತ್ತಿತರರಿದ್ದರು.