ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಭಕ್ತರ ನಿರ್ವಹಣೆಗೆ ಸೂಕ್ತ ವ್ಯವಸ್ಥೆ, ತುರ್ತು ವೈದ್ಯಕೀಯ ಚಿಕಿತ್ಸೆಯೂ ಲಭ್ಯ
ಮಹಾಕುಂಭನಗರ: ಮಹಾಕುಂಭ ಮೇಳದಲ್ಲಿ ವಸಂತ ಪಂಚಮಿಯ ದಿನ ನಡೆಯಲಿರುವ ಮೂರನೇ ಅಮೃತ ಸ್ನಾನದ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಕ್ತರು ಪುಣ್ಯಸ್ನಾನ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.
ಜನವರಿ 29ರಂದು ಮೌನಿ ಅಮಾವಾಸ್ಯೆಯ ದಿನ 2ನೇ ಅಮೃತ ಸ್ನಾನದ ಪ್ರಯುಕ್ತ ಕೋಟ್ಯಂತರ ಜನರು ಮೇಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ 30 ಜನರು ಮೃತಪಟ್ಟು, 60 ಜನರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಅಮೃತ ಸ್ನಾನದ ಸಂದರ್ಭದಲ್ಲಿ ಭಕ್ತರ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. 2019ರ ಅರ್ಧಕುಂಭ ಮೇಳದಲ್ಲಿ ಕಾರ್ಯನಿರ್ವಹಿಸಿದ್ದ ತಂಡದ ಇಬ್ಬರು ಐಎಎಸ್ ಅಧಿಕಾರಿಗಳನ್ನೂ ಕುಂಭಮೇಳದ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಎಡಿಜಿಪಿ ಭಾನು ಭಾಸ್ಕರ್ ಅವರು ಖುದ್ದಾಗಿ ಜನಸಂದಣೆ ನಿರ್ವಹಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವಸಂತ ಪಂಚಮಿ ಹಿನ್ನೆಲೆಯಲ್ಲಿ ಭಾನುವಾರವೇ ಲಕ್ಷಾಂತರ ಭಕ್ತರು ಪ್ರಯಾಗರಾಜ್ಗೆ ಆಗಮಿಸಿದ್ದು, 1 ಕೋಟಿಗೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಈ ಮೂಲಕ ಜನವರಿ 13ರಿಂದ ಒಟ್ಟು 33 ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನ ಮಾಡಿದ್ದಾರೆ. ವಸಂತ ಪಂಚಮಿ ಬಳಿಕ ಫೆಬ್ರವರಿ 12ರಂದು (ಮಾಘ ಪೂರ್ಣಿಮೆ) ಮತ್ತು ಫೆಬ್ರವರಿ 26 (ಮಹಾಶಿವರಾತ್ರಿ) ರಂದು ಅಮೃತ ಸ್ನಾನ ನಡೆಯಲಿದೆ.
ಮೂರನೇ ಅಮೃತ ಸ್ನಾನದ ದಿನ ಅವಘಡ ಸಂಭವಿಸಿದರೆ ಪರಿಸ್ಥಿತಿಯನ್ನು ನಿರ್ವಹಿಸಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸರ್ವ ಸನ್ನದ್ಧರಾಗಿದ್ದಾರೆ. ಮಹಾಕುಂಭ ಮೇಳದಲ್ಲಿರುವ ಆಸ್ಪತ್ರೆಗಳನ್ನು ಹೈಅಲರ್ಟ್ ಸ್ಥಿತಿಯಲ್ಲಿರಿಸಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
77 ದೇಶಗಳ ರಾಯಭಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಮತ್ತು ವಿದೇಶಿ ಅತಿಥಿಗಳು ಸೇರಿ 118 ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ವಿವಿಧ ದೇಶಗಳ ರಾಯಭಾರಿಗಳು ತಮ್ಮ ಕುಟುಂಬಸ್ಥರೊಂದಿಗೆ ಪುಣ್ಯ ಸ್ನಾನದಲ್ಲಿ ಪಾಲ್ಗೊಂಡಿದ್ದರು. ವಿದೇಶಿ ಅತಿಥಿಗಳು ಪುಣ್ಯ ಸ್ನಾನ ಮಾಡಿದ್ದು, ವಿಶೇಷ ಅನುಭವ, ಪ್ರಪಂಚದ ಅತಿ ದೊಡ್ಡ ಧಾರ್ವಿುಕ ಕಾರ್ಯಕ್ರಮದಲ್ಲಿ ಮಾಡಿರುವ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜನಸಂದಣಿ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಆಪರೇಷನ್ ಇಲವೆನ್ ಜಾರಿಗೆ ತಂದಿದೆ. ಸಿಎಂ ಯೋಗಿ ಆದಿತ್ಯನಾಥ ಅವರ ಸೂಚನೆ ಯಂತೆ ಒನ್ ವೇ ಟ್ರಾಫಿಕ್, ಹೆಚ್ಚುವರಿ ಪೊಲೀಸರ ನಿಯೋಜನೆ, ಬ್ಯಾರಿಕೇಡ್ಗಳ ಹೆಚ್ಚಳ ಸೇರಿ 11 ನಿಯಮಗಳನ್ನು ರೂಪಿಸಲಾಗಿದೆ. 2500 ಬಸ್ಗಳನ್ನು ನಿಯೋಜಿಸಲಾಗಿದ್ದು, ಈ ಬಸ್ಗಳು ವಿವಿಧ ನಗರಗಳಿಂದ ಪ್ರಯಾಗ್ರಾಜ್ಗೆ ಸಂಪರ್ಕ ಕಲ್ಪಿಸಲಿವೆ.
ಮಹಾಕುಂಭ ಮೇಳದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿ ಸಲ್ಲಿಕೆಯಾಗಿರುವ 3 ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾ. ಸಂಜಯ್ ಕುಮಾರ್ ಅವರ ದ್ವಿಸದಸ್ಯ ಪೀಠ ಅರ್ಜಿಗಳ ವಿಚಾರಣೆ ನಡೆಸಲಿದೆ. ವಕೀಲರಾದ ವಿಶಾಲ್ ತಿವಾರಿ ಸಲ್ಲಿಸಿರುವ ಪಿಐಎಲ್ ನಲ್ಲಿ ಕಾಲ್ತುಳಿತ ಘಟನೆಗಳನ್ನು ತಡೆಯಲು ಮತ್ತು ಸಂವಿಧಾನದ 21 ನೇ ವಿಧಿಯನ್ವಯ ಸಮಾನತೆ ಮತ್ತು ಜೀವನದ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಕೋರಲಾಗಿದೆ.