ಬೆಟ್ಟದಪುರದ ಶ್ರೀಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ. 
ನ್ಯೂಸ್

ದೀಪಾವಳಿ ದೀವಟಿಗೆ ಉತ್ಸವ ಆಚರಣೆಗೆ ಸಕಲ ಸಿದ್ಧತೆ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಐತಿಹಾಸಿಕ ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ದೀಪಾವಳಿ ದೀವಟಿಗೆ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ತಲೆತಲಾಂತರದಿಂದಲೂ ಪ್ರತಿವರ್ಷ ಇಲ್ಲಿನ ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿರುವ ದೀವಟಿಗೆ ಉತ್ಸವ ಸಾವಿರಾರು ಭಕ್ತಾದಿಗಳಿಗೆ ಮನೆತನದ ಹಬ್ಬವಾಗಿದೆ.

ಪಂಚಿನ ಮೆರವಣಿಗೆಯ ಉತ್ಸವ: ನ.1ರ ಶುಕ್ರವಾರ ರಾತ್ರಿ ಗ್ರಾಮದ ಹೃದಯಭಾಗದ ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಇರುವ ಬೆಳ್ಳಿ ಬಸಪ್ಪ, ಗಣಪತಿ ಮತ್ತು ಭ್ರಮರಾಂಭ ಸಮೇತ ಸಿಡಿಲು ಶ್ರೀಮಲ್ಲಿಕಾರ್ಜುನಸ್ವಾಮಿ ಉತ್ಸವ ಮೂರ್ತಿಗಳನ್ನು ಬೆಟ್ಟದ ಮೇಲಿನ ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಬಳಿಕ ನ.2ರ ಶನಿವಾರ ಬೆಳಗ್ಗೆ ಬೆಟ್ಟದ ದೇವಸ್ಥಾನದಲ್ಲಿ ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾ-ಕೈಂಕರ್ಯಗಳು ನಡೆಯಲಿವೆ. ನಂತರ ಉತ್ಸವ ಮೂರ್ತಿಗಳ ಪಂಚಿನ ಮೆರವಣಿಗೆ ಆರಂಭವಾಗಲಿದೆ. ಅಂದು ರಾತ್ರಿ ಸುಮಾರು 12 ಗಂಟೆವರೆಗೆ ಉತ್ಸವ ನಡೆಯಲಿದೆ.

ಭಕ್ತರು ತಮ್ಮ ಮನೆಯಲ್ಲಿಯೇ ಸಿದ್ಧಪಡಿಸಿ ತಂದ ಪಂಜಿನೊಂದಿಗೆ (ದೀವಟಿಗೆ) ಬೆಟ್ಟದಪುರ, ಬೆಟ್ಟದತುಂಗ, ಹರದೂರು, ಡಿ.ಜಿ. ಕೊಪ್ಪಲು, ಬಾರಸೇ, ಕುಡುಕೂರು, ಕೂರಗಲ್ಲು ಸೇರಿದಂತೆ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ರಾತ್ರಿ ಇಡೀ ಮೆರವಣಿಗೆ ಮಾಡಿ ಬಳಿಕ ಮೂಲ ಸ್ಥಾನವಾದ ಬೆಟ್ಟದಪುರದ ಶ್ರೀಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ತರುತ್ತಾರೆ. ಈ ವೇಳೆ ಬೆಟ್ಟದ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರತಿ ಮನೆಗಳ ಮುಂದೆ ಹಸಿರು ಚಪ್ಪರ ಹಾಕಿರುತ್ತಾರೆ. ಬಳಿಕ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಮೆರವಣಿಗೆ ವೇಳೆ ಬೆಟ್ಟದತುಂಗ ಹಾಗೂ ಕುಡುಕೂರು ಗ್ರಾಮಗಳಲ್ಲಿ ಜಾತ್ರೆ ರೀತಿಯಲ್ಲಿ ಹಬ್ಬವು ವಿಜೃಂಭಣೆಯಿಂದ ನಡೆಯುತ್ತಿದೆ. ಹಿಂದಿನ ಕಾಲದಿಂದಲೂ ದೇವರ ಮೆರವಣಿಗೆ ಉತ್ಸವವು ಗ್ರಾಮದ ಉಪ್ಪಾರ ಸಮುದಾಯದವರು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ಇವರ ನೇತೃತ್ವದಲ್ಲಿ ನಡೆಯಲಿದೆ. ಉತ್ಸವಕ್ಕೆ ಆಗಮಿಸುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ.