ವಿನಾಯಕ ಬಾಯರಿ ನುಡಿನಮನ ಕಾರ್ಯಕ್ರಮದಲ್ಲಿ ಬಾಯರಿ ಕುಟುಂಬದ ಸದಸ್ಯರಿಗೆ ಕೆ.ಎಸ್.ಈಶ್ವರಪ್ಪ ಚೆಕ್ ಹಸ್ತಾಂತರಿಸಿದರು. ಕೆ.ಸಿ.ನಟರಾಜ ಭಾಗವತ್, ಸ.ನ.ಮೂರ್ತಿ, ಸಂದೇಶ ಉಪಾಧ್ಯ, ವಿ.ರಾಜು ಮುಂತಾದವರಿದ್ದರು. 
ನ್ಯೂಸ್

ಅರ್ಚಕ ಬಾಯರಿ ಕುಟುಂಬಕ್ಕೆ ಸಕಲ ನೆರವು: ಕೆಎಸ್‌ಇ ಅಭಯ

ಶಿವಮೊಗ್ಗ : ಇತ್ತೀಚೆಗೆ ನಿಧನರಾದ ವಿನೋಬನಗರ ಶನೈಶ್ಚರ ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ. ವಿನಾಯಕ ಬಾಯರಿ ಅವರ ಕುಟುಂಬಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಶನೈಶ್ಚರ ದೇವಾಲಯ ಸೇವಾ ಸಮಿತಿ ಟ್ರಸ್ಟ್ ಬೆನ್ನುಲುಬಾಗಿ ನಿಂತಿದೆ. ಬಾಯರಿ ಅವರ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಸಂಪೂರ್ಣ ಸಹಕಾರ ಹಾಗೂ ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು ಎಂದು ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದಾರೆ.

ವಿನಾಯಕ ಬಾಯರಿ ಸ್ಮರಣಾರ್ಥ ಗುರುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಬಾಯರಿ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ಹಸ್ತಾಂತರಿಸಿ ಮಾತನಾಡಿದ ಈಶ್ವರಪ್ಪ, ವಿನಾಯಕ ಬಾಯರಿ ಅವರನ್ನು ನನ್ನ ಕುಟುಂಬದ ಸದಸ್ಯನಂತೆ ಕಂಡಿದ್ದೆ. ಅವರ ಹಿರಿಯ ಪುತ್ರಿಗೆ ಪೈಲಟ್ ಆಗಬೇಕೆಂಬ ಕನಸಿದೆ. ಇನ್ನೊಬ್ಬಳು ಸಂಶೋಧನೆ ನಡೆಸುವ ಬಯಕೆ ಹೊಂದಿದ್ದಾಳೆ. ಇವರೆಡನ್ನೂ ಈಡೇರಿಸುವ ಜವಾಬ್ದಾರಿ ನನ್ನದು. ಅವರ ಪತ್ನಿಗೆ ನನ್ನ ಶಿಕ್ಷಣ ಸಂಸ್ಥೆಯಲ್ಲಿ ನೌಕರಿ ನೀಡುವೆ ಎಂದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್ ಮಾತನಾಡಿ, ವಿನಾಯಕ ಬಾಯರಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದವರು. ಅ.ಪ.ರಾಮ ಭಟ್ ಮರಣದಿಂದ ಶೂನ್ಯ ಆವರಿಸಿತ್ತು. ಅದನ್ನು ತುಂಬುವ ಗುಣವನ್ನು ಇವರು ಹೊಂದಿದ್ದರು. ಶಿವಮೊಗ್ಗವನ್ನು ಕಲೆ, ಧಾರ್ಮಿಕ, ಸಂಸ್ಕೃತಿಯ ಕೇಂದ್ರವಾಗಿಸಲು ಪ್ರಯತ್ನಿಸಿದ್ದರು ಎಂದು ಸ್ಮರಿಸಿದರು.

ಸಂಸ್ಕೃತ ವಿದ್ವಾಂಸ ಡಾ. ಸನತ್‌ಕುಮಾರ್, ವೇ.ಬ್ರ.ಅಚ್ಚುತ ಅವಧಾನಿ, ಪ್ರಮುಖರಾದ ಶುಭಾ ರಾಘವೇಂದ್ರ, ವಿದ್ವಾನ್ ಜಿ.ಎಸ್.ನಟೇಶ್, ಅ.ನಾ.ವಿಜಯೇಂದ್ರ, ಡಾ. ಎಸ್.ಶ್ರೀಧರ್, ವೆಂಕಟೇಶ್ ರಾವ್, ಶ್ರೀರಂಜಿನಿ ದತ್ತಾತ್ರಿ, ಶಶಿಕಾಂತ್ ಕರಣಂ, ಸುಬ್ರಹ್ಮಣ್ಯ ಉಡುಪ, ಸಂದೇಶ ಉಪಾಧ್ಯ, ಸ.ನ.ಮೂರ್ತಿ ನುಡಿನಮನ ಸಲ್ಲಿಸಿದರು. ಪ್ರಮುಖರಾದ ವಿ.ರಾಜು, ಉಮೇಶ ಆರಾಧ್ಯ, ಸಚ್ಚಿದಾನಂದ ಉಡುಪ, ಎನ್.ಶ್ರೀಧರ ಉಡುಪ, ಶಬರೀಶ ಕಣ್ಣನ್ ಮುಂತಾದವರಿದ್ದರು.