ನ್ಯೂಸ್

ಪತನಗೊಂಡ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ: ಅಧಿಕಾರಿಗಳಿಂದ ಸ್ಪಷ್ಟನೆ

ಕಾಠ್ಮಂಡು: ಭಾನುವಾರ ಬೆಳಗ್ಗೆ ಪತನಗೊಂಡಿದ್ದ 22 ಪ್ರಯಾಣಿಕರಿದ್ದ ಸಣ್ಣ ವಿಮಾನದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ನೇಪಾಳದ ಸರ್ಕಾರದ ಅಧಿಕಾರಿಗಳು ಸೋಮವಾರ ಅಧಿಕೃತ ಮಾಹಿತಿ ನೀಡಿದ್ದಾರೆ.

ಪ್ರಕ್ಷುಬ್ಧ ವಾತಾವರಣದಿಂದಾಗಿ ವಿಮಾನ ನಾಪತ್ತೆಯಾಗಿತ್ತು. ತೀವ್ರ ಹುಡುಕಾಟದ ಬಳಿಕ ನದಿ ತಟದಲ್ಲಿ ವಿಮಾನ ಪತನಗೊಂಡಿರುವುದು ಪತ್ತೆಯಾಗಿತ್ತು.ತಾರಾ ಏರ್​ ಕ್ರಾಫ್ಟ್​​ ಸಂಸ್ಥೆಯ ಟ್ವಿನ್​ ಒಟರ್​ ಎಂಜಿನ್​ನ 9ಎನ್​​-ಎಇಟಿ ವಿಮಾನ ವಾಯುವ್ಯ ನೇಪಾಳದ ಪೊಖರಾದಿಂದ ಬೆಳಗ್ಗೆ 9.55ಕ್ಕೆ ಟೇಕಾಫ್​ ಆದ ಕೆಲ ನಿಮಿಷದಲ್ಲಿ ಸಂಪರ್ಕ ಕಡಿದುಕೊಂಡಿತ್ತು.

ಪಶ್ಚಿಮ ನೇಪಾಳದ ಗಿರಿ ಪ್ರದೇಶದ ಜೋಮ್ಸಮ್​ನಲ್ಲಿ 10.15ಕ್ಕೆ ವಿಮಾನ ಇಳಿಯಬೇಕಿದ್ದ ವಿಮಾನ ನಿಗದಿತ ಅವಧಿ ಮೀರಿದರೂ ಪತ್ತೆಯಾಗಲಿಲ್ಲ. ಇದರಿಂದ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ಶಂಕಿಸಲಾಗಿತ್ತು. ಅಂತೆಯೇ ವಿಮಾನ ದುರಂತಕ್ಕೀಡಾಗಿತ್ತು. ಇನ್ನು ವಾಯು ಮಾರ್ಗದ ಘಾಸಾ ಎಂಬಲ್ಲಿ ಭಾರೀ ಶಬ್ದ ಬೆಂಕಿ ಹತ್ತಿಕೊಂಡ ವಿಮಾನ ಹೋಗುತ್ತಿದ್ದ ಬಗ್ಗೆ ಸ್ಥಳೀಯರು ಹೇಳಿದ್ದರು. ಆನಂತರ ಸೇನಾ ಸಹಾಯದಿಂದ ವಿಮಾನ ಪತನಗೊಂಡಿದ್ದ ಜಾಗವನ್ನು ಪತ್ತೆ ಹಚ್ಚಲಾಗಿತ್ತು. 

22 ಪ್ರಯಾಣಿಕರ ಪೈಕಿ  ನಾಲ್ವರು ಮುಂಬೈ ಮೂಲದವರಾದ ಅಶೋಕ್​ ಕುಮಾರ್​ ತ್ರಿಪಾಠಿ, ಧನುಷ್​ ತ್ರಿಪಾಠಿ, ರಿತಿಕಾ ತ್ರಿಪಾಠಿ, ಮತ್ತು ವೈಭವಿ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಇದೀಗ ಘಟನೆಯಲ್ಲಿ ಎಲ್ಲರೂ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)