ನ್ಯೂಸ್

ಹೇಮಾವತಿ ವಿವಾದ ಚರ್ಚೆಗೆ ಸರ್ವಪಕ್ಷಗಳ ಸಭೆ: ರವಿಕುಮಾರ್ ಒತ್ತಾಯ | Let the FIR will be withdrawn

ಬೆಂಗಳೂರು: ಹೇಮಾವತಿ ಲಿಂಕ್ ಕಾಲುವೆ ವಿವಾದವನ್ನು ಸರ್ಕಾರ ಪೂರ್ವಾಗ್ರಹಪೀಡಿತ ಮನಸ್ಸಿನಿಂದ ನೋಡದೆ, ತಕ್ಷಣ ಸರ್ವಪಕ್ಷ ಸಭೆಗಳನ್ನು ಕರೆದು ಚರ್ಚಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಒತ್ತಾಯಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಹೇಮಾವತಿ ಲಿಂಕ್ ಕಾಲುವೆಗೆ ಪಕ್ಷಾತೀತ ವಿರೋಧವಿದೆ. ತುಮಕೂರು ಜಿಲ್ಲೆಗೆ ನೀರಿನ ಅಭಾವವಾಗಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದ್ದರೂ ಸರ್ಕಾರದ ನಿಲುವು ಅಚ್ಚರಿ ಉಂಟು ಮಾಡಿದೆ.

ಹೇಮಾವತಿ ಕಾಲುವೆಯ ನೀರು ತಿರುಗಿಸುವುದರಿಂದ ತೊಂದರೆಯಾಗಲಿದೆ ಎಂದು ತುಮಕೂರು ರೈತರು ಹೋರಾಟಕ್ಕೆ ಇಳಿದಿದ್ದು, ಜನಪ್ರತಿನಿಧಿಗಳು ಮಠಾಧೀಶರು ಬೆಂಬಲಿಸಿದ್ದಾರೆ. ಎ್ಐಆರ್ ದಾಖಲಿಸಿರುವ ಸರ್ಕಾರಕ್ಕೆ ಬುದ್ಧಿಭ್ರಮಣೆಯಾದಂತಿದೆ ಎಂದು ಟೀಕಿಸಿದರು.

ಸಮಸ್ಯೆಯನ್ನು ಪಕ್ಷ ರಾಜಕಾರಣ, ಭಾವನಾತ್ಮಕ ನೆಲೆಯಲ್ಲಿ ನೋಡುವುದು ಬೇಡ. ಹೇಮಾವತಿ ಲಿಂಕ್ ಕಾಲುವೆ ನಿರ್ಮಿಸಬೇಕೆಂಬ ಹಠಮಾರಿ ಧೋರಣೆಯನ್ನು ಸರ್ಕಾರ ಕೈಬಿಟ್ಟು, ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೃಷಿ, ನೀರಾವರಿ ಎಲ್ಲದರ ಬಗ್ಗೆಯೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಗೊತ್ತಿದೆ. ಹೋರಾಟದಲ್ಲಿದ್ದ ಸ್ವಾಮೀಜಿಗಳ ಮೇಲೂ ಎ್ಐಆರ್ ದಾಖಲಿಸಲಾಗಿದೆ. ಅವರನ್ನೂ ಜೈಲಿಗೆ ಹಾಕಲು ಸರ್ಕಾರ ಹೊರಟಿದೆ ಎಂದು ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ನೌಕರಿ ನೀಡಲಿ

ಗುಡ್ಡ ಕುಸಿತದಲ್ಲಿ ಮಂಗಳೂರಿನ ಅಶ್ವಿನಿಯವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಅವರ ಎರಡು ಕಾಲುಗಳನ್ನು ತುಂಡರಿಸಿದ್ದು, ಎಲ್ಲರನ್ನೂ ಕಳೆದುಕೊಂಡಿದ್ದಾರೆ. ಮಂಗಳೂರಿನ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದಿರುವೆ. ಒಂದು ವಾರದ ನಂತರ ಅಶ್ವಿನಿಯವರಿಗೆ ಎಲ್ಲ ಗೊತ್ತಾಗುವ ಸಾಧ್ಯತೆಗಳಿವೆ.

ರಾಜ್ಯ ಸರ್ಕಾರ ನೊಂದ ಮಹಿಳೆ ನೆರವಿಗೆ ನಿಲ್ಲಬೇಕು, ಮಾನವೀಯತೆ ಆಧಾರದಲ್ಲಿ ಜಿಲ್ಲಾ ಕಚೇರಿ ಇಲ್ಲವೇ ಯಾವುದೇ ಇಲಾಖೆಯಲ್ಲಿ ಸರ್ಕಾರಿ ನೌಕರಿಗೆ ಕೊಡಬೇಕು ಎಂದು ಎನ್.ರವಿಕುಮಾರ್ ಮನವಿ ಮಾಡಿದರು.

ಅಪ್ರಬುದ್ಧ ವರ್ತನೆ

ದೇಶದ ರಾಜತಾಂತ್ರಿಕ ಕಾರ್ಯತಂತ್ರದ ಭಾಗವಾಗಿ ಹಲವು ತಂಡಗಳು ವಿದೇಶ ಪ್ರವಾಸ ಕೈಗೊಂಡಿದ್ದರೆ, ಈ ತಂಡಗಳ ಬಗ್ಗೆಯೇ ಕಾಂಗ್ರೆಸ್ ಕುಹಕವಾಡುತ್ತಿರುವುದು ಅಪ್ರಬುದ್ಧ ವರ್ತನೆ ಎಂದು ಟೀಕಿಸಿದರು.

ದೇಶ ವಿರೋಧಿ ವಿಚಾರಗಳನ್ನು ಕಾಂಗ್ರೆಸ್ ಮುಂದೆ ಮಾಡುತ್ತಿದೆ. ಏನೇ ವಿರೋಧವಿದ್ದರೂ ದೇಶದ ಹೊರಗಿನ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆಪರೇಷನ್ ಸಿಂಧೂರ ಬಗ್ಗೆಯೂ ಚುಟು ಪುಟು ಯುದ್ಧವೆಂದು ಹೇಳಿ, ಪಾಕಿಸ್ತಾನಕ್ಕೆ ಬೇಕಿರುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಮಾತನಾಡಿದರು ಎಂದು ಎನ್.ರವಿಕುಮಾರ್ ಆರೋಪಿಸಿದರು.