ನ್ಯೂಸ್

ಶಾಲೆ, ಕಾಲೇಜು, ಮಾಲ್, ಸಿನಿಮಾ ಹಾಲ್​... ಈ ರಾಜ್ಯದಲ್ಲಿ ಎಲ್ಲಾ ಓಪನ್!

ಪಟ್ನಾ: ಕರೊನಾ ಸೋಂಕು ಇಳಿಕೆಯ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಸಂಪೂರ್ಣ ಅನ್​ಲಾಕ್​ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಅಲ್ಲಿನ ಸಿಎಂ ನಿತೀಶ್​ ಕುಮಾರ್​ ಇಂದು ಘೋಷಿಸಿದ್ದಾರೆ.

ಎಲ್ಲಾ ಅಂಗಡಿಗಳು, ಬಿಸಿನೆಸ್​ಗಳು, ಶಾಪಿಂಗ್​ ಮಾಲ್​, ಪಾರ್ಕ್​ ಮತ್ತು ಉದ್ಯಾನಗಳು, ಧಾರ್ಮಿಕ ಸ್ಥಳಗಳು ಮತ್ತು ಇತರ ಸೌಲಭ್ಯಗಳು ಸಹಜವಾಗಿ ಕಾರ್ಯ ನಿರ್ವಹಿಸಬಹುದು. ಜೊತೆಗೇ ರಾಜ್ಯಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಳ್ಳಬಹುದು. ವಿಶ್ವವಿದ್ಯಾಲಯಗಳು, ಕಾಲೇಜುಗಳು, 1 ರಿಂದ 12 ನೇ ತರಗತಿವರೆಗಿನ ಶಾಲಾ ಕಾಲೇಜುಗಳು, ಕೋಚಿಂಗ್ ಕೇಂದ್ರಗಳು ತೆರೆಯಲಿದ್ದು, ಯಾವುದೇ ಪರೀಕ್ಷೆ ನಡೆಸಲು ಕೂಡ ಮುಕ್ತ ಅವಕಾಶವಿದೆ ಎಂದು ಸಿಎಂ ತಿಳಿಸಿದ್ದಾರೆ.

ಆಯಾ ಜಿಲ್ಲಾಡಳಿತದ ಅನುಮತಿ ಪಡೆದು, ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿನೆಯೊಂದಿಗೆ ಯಾವುದೇ ಸಾಮಾಜಿಕ, ರಾಜಕೀಯ, ಮನೋರಂಜನಾ, ಕ್ರೀಡಾ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಸಿನಿಮಾ ಹಾಲ್, ಕ್ಲಬ್, ಜಿಮ್, ಸ್ವಿಮ್ಮಿಂಗ್​ ಪೂಲ್​ ಮತ್ತು ರೆಸ್ಟೊರೆಂಟ್​ಗಳು ಶೇ. 50 ರಷ್ಟು ಸಾಮರ್ಥ್ಯದಲ್ಲಿ ತೆರೆಯಬಹುದು ಎನ್ನಲಾಗಿದೆ. (ಏಜೆನ್ಸೀಸ್)