ನ್ಯೂಸ್

ಹಿಂದು ದೇವಾಲಯದ ಜೀರ್ಣೋದ್ಧಾರಕ್ಕಾಗಿ 1 ಕೋಟಿ ರೂ. ಬಿಡುಗಡೆ ಮಾಡಿದ ಪಾಕಿಸ್ತಾನ! Hindu Temple

Hindu Temple: ಪಾಳು ಬಿದ್ದಿರುವ ಹಿಂದು ದೇವಾಲಯದ ಜೀರ್ಣೋದ್ಧಾರಕ್ಕಾಗಿ ಪಾಕಿಸ್ತಾನ ಸರ್ಕಾರ 1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.

64 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ದೇವಾಲಯವನ್ನು ಮರುನಿರ್ಮಾಣ ಮಾಡಲು ಪಾಕಿಸ್ತಾನಿ ರೂಪಾಯಿ 1 ಕೋಟಿ ( ಭಾರತೀಯ ರೂಪಾಯಿ 30 ಲಕ್ಷ) ಬಜೆಟ್ ಬಿಡುಗಡೆ ಮಾಡಲಾಗಿದೆ. ಈ ದೇವಸ್ಥಾನವು ಇವ್ಯಾಕ್ಯುಯೇಶನ್ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಅಡಿಯಲ್ಲಿದೆ. ಇದು ಪಾಕಿಸ್ತಾನದ ಅಲ್ಪಸಂಖ್ಯಾತರ ಪೂಜಾ ಸ್ಥಳಗಳನ್ನು ನೋಡಿಕೊಳ್ಳುವ ಫೆಡರಲ್ ಸಂಸ್ಥೆಯಾಗಿದೆ.

ಪಂಜಾಬ್‌ನ ರಾವಿ ನದಿಯ ಪಶ್ಚಿಮ ದಡದಲ್ಲಿರುವ ನರೋವಾಲ್‌ ಜಿಲ್ಲೆಯ ಜಫರ್ವಾಲ್ ಪಟ್ಟಣದಲ್ಲಿರುವ ಬಾವೊಲಿ ಸಾಹಿಬ್ ದೇವಾಲಯದ ಮರುನಿರ್ಮಾಣವನ್ನು ಇದೀಗ ಪ್ರಾರಂಭಿಸಲಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮ ಡಾನ್ ನ್ಯೂಸ್ ವರದಿ ಮಾಡಿದೆ.

ಪಾಕಿಸ್ತಾನ ಹಿಂದು ದೇವಾಲಯವನ್ನು ಏಕೆ ಮರುನಿರ್ಮಿಸುತ್ತಿದೆ?

ಪಂಜಾಬ್‌ನ ನರೋವಾಲ್ ಜಿಲ್ಲೆಯಲ್ಲಿ ಪ್ರಸ್ತುತ ಹಿಂದು ದೇವಾಲಯವಿಲ್ಲ. ಇದರ ಪರಿಣಾಮ ಅಲ್ಲಿ ವಾಸಿಸುವ ಹಿಂದುಗಳು ತಮ್ಮ ಮನೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಲು ಅಥವಾ ಸಿಯಾಲ್ಕೋಟ್ ಮತ್ತು ಲಾಹೋರ್​ನಲ್ಲಿರುವ ದೇವಾಲಯಗಳಿಗೆ ಪ್ರಯಾಣಿಸುತ್ತಾರೆ. ನರೋವಾಲ್‌ನಲ್ಲಿ ಪ್ರಸ್ತುತ 1,453 ಕ್ಕೂ ಹೆಚ್ಚು ಹಿಂದು ಜನರು ವಾಸಿಸುತ್ತಿದ್ದಾರೆ. ಪಾಕಿಸ್ತಾನ ಧರ್ಮಸ್ಥಾನ ಸಮಿತಿಯ ಪ್ರಕಾರ, ಪಾಕಿಸ್ತಾನ ಸ್ಥಾಪನೆಯಾದ ನಂತರ ನರೋವಾಲ್ ಜಿಲ್ಲೆಯಲ್ಲಿ 45 ಹಿಂದೂ ದೇವಾಲಯಗಳು ಇದ್ದವು. ಆದರೆ, ಕಾಲಾನಂತರದಲ್ಲಿ ಅವೆಲ್ಲವೂ ಶಿಥಿಲಗೊಂಡವು ಮತ್ತು ಈಗ ಈ ಪ್ರದೇಶದಲ್ಲಿ ಹಿಂದುಗಳು ಪೂಜಿಸಲು ಯಾವುದೇ ಸ್ಥಳವಿಲ್ಲ. ಈ ಕಾರಣಕ್ಕೆ ಹಿಂದು ದೇವಸ್ಥಾನದ ಮರುನಿರ್ಮಾಣಕ್ಕೆ ಪಾಕ್ ಮುಂದಾಗಿದೆ.

ದೇವಾಲಯದ ಪುನರ್​ನಿರ್ಮಾಣಕ್ಕಾಗಿ ಪ್ರತಿಪಾದಿಸಿದ್ದು ಯಾರು?

ಬಾವೊಲಿ ಸಾಹಿಬ್ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಪಾಕಿಸ್ತಾನದ ಧರ್ಮಸ್ಥಾನ ಸಮಿತಿಯು ದೀರ್ಘಕಾಲದಿಂದ ಪ್ರತಿಪಾದಿಸುತ್ತಿದೆ ಎಂದು ಪಾಕ್ ಧರ್ಮಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ರತನ್ ಲಾಲ್ ಆರ್ಯ ಹೇಳಿದ್ದಾರೆ. ಸಮಿತಿಯ ಹಾಲಿ ಅಧ್ಯಕ್ಷ ಸಾವನ್ ಚಂದ್ ಮಾತನಾಡಿ, ಬಾವೊಲಿ ಸಾಹಿಬ್ ದೇವಾಲಯದ ಜೀರ್ಣೋದ್ಧಾರವು ಹಿಂದೂ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸುತ್ತದೆ ಮತ್ತು ಸ್ಥಳದಲ್ಲಿ ತಮ್ಮ ಧಾರ್ಮಿಕ ಆಚರಣೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ ಎಂದರು. (ಏಜೆನ್ಸೀಸ್​)