ಮಲಯಾಳಂ ನಟಿಯ ಲೈಂಗಿಕ ದೌರ್ಜನ್ಯ ಕೇಸ್ನ ಆರು ಆರೋಪಿಗಳು
- ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಕೇಸ್
- ಡಿ.12ರಂದು ತೀರ್ಪು ಪ್ರಕಟಿಸುವುದಾಗಿ ಘೋಷಿಸಿದ್ದ ನ್ಯಾಯಾಲಯ
- 6 ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ, 50000 ರೂ. ದಂಡ
ಕೊಚ್ಚಿ: ಸುಮಾರು 8 ವರ್ಷಗಳ ಹಿಂದೆ ಖ್ಯಾತ ನಟಿಯನ್ನು ಕಿಡ್ನಾಪ್ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಕಡೆಗೂ ಪೂರ್ಣವಿರಾಮ ಸಿಕ್ಕಿದೆ. ಈ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಕೂಡ ಕೇಳಿಬಂದಿತ್ತು. ಹೀಗಾಗಿ ಅವರನ್ನು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡುತ್ತದೆಯೇ ಎಂದು ಅನೇಕರು ಕಾಯುತ್ತಿದ್ದರು. ಆದರೆ, ಈ ಪ್ರಕರಣದಿಂದ ದಿಲೀಪ್ರನ್ನು ಕೋರ್ಟ್ ಖುಲಾಸೆಗೊಳಿಸಿ, ಉಳಿದ 6 ಆರೋಪಿಗಳನ್ನು ತಪಿಸ್ಥರೆಂದು ಘೋಷಿಸಿತ್ತು. ಇಂದು (ಡಿ.12) ಕೇಸ್ನ ತೀರ್ಪು ಪ್ರಕಟಿಸಿದ ಕೋರ್ಟ್, ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.
ಅತ್ತ ದಿಲೀಪ್ಗೆ ಬಿಗ್ ರಿಲೀಫ್ ನೀಡಿರುವ ಕೋರ್ಟ್, ಪಲ್ಸರ್ ಸುನಿ ಸೇರಿ ಆರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡವನ್ನು ಪಾವತಿಸಲು ಸೂಚಿಸಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ಇಂದು ತೀರ್ಪು ಪ್ರಕಟಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಸುನಿಲ್‌ಗೆ ಐಟಿ ಕಾಯ್ದೆಯಡಿ ಹೆಚ್ಚುವರಿಯಾಗಿ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದರು. ಅಲ್ಲಿಗೆ, ಸುನಿಗೆ 25 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು.
ಆರು ಆರೋಪಿಗಳಾದ ಎನ್.ಎಸ್. ಸುನಿಲ್ (ಪಲ್ಸರ್ ಸುನಿ), ಮಾರ್ಟಿನ್ ಆಂಟನಿ, ಬಿ. ಮಣಿಕಂದನ್, ವಿ.ಪಿ. ವಿಜೀಶ್, ಎಚ್. ಸಲೀಂ, ಮತ್ತು ಪ್ರದೀಪ್ 50,000 ರೂ. ದಂಡದ ಜತೆ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಮುಖ್ಯವಾಗಿ, ಆರೋಪಿಗಳ ದಂಡದ ಮೊತ್ತದಿಂದ ಸಂತ್ರಸ್ತ ನಟಿಗೆ 5 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟಕ್ಕೂ ಏನಿದು ಪ್ರಕರಣ?
ಅಂದಹಾಗೆ, ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಫೆಬ್ರವರಿ 17, 2017 ರಂದು ನಡೆಯಿತು. ಸಂತ್ರಸ್ತ ನಟಿ ತ್ರಿಶೂರ್ನಿಂದ ಎರ್ನಾಕುಲಂಗೆ ಸಿನಿಮಾ ಚಿತ್ರೀಕರಣಕ್ಕಾಗಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿ, ಆಕ್ಷೇಪಾರ್ಹ ವಿಡಿಯೋವನ್ನು ಆರೋಪಿಗಳು ಚಿತ್ರೀಕರಿಸಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ನಟಿಯ ದೂರಿನ ಮೇರೆಗೆ ತನಿಖೆ ನಡೆಸಿ, ಬಂಧಿಸಲಾಯಿತು,(ಏಜೆನ್ಸೀಸ್).