ಆಲಿಯಾ- ಹುಮಾ ಖುರೇಷಿ 
ನ್ಯೂಸ್

ಆಲಿಯಾ ವರ್ಸಸ್ ಹುಮಾ: ಜು.3ಕ್ಕೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನಟಿಯರ ಮಹಾಕದನ

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಒಂದೇ ದಿನ ಆಲಿಯಾ -ಹುಮಾ ನಟನೆಯ ಸಿನಿಮಾ ರಿಲೀಸ್
  • ಇಬ್ಬರ ನಾಯಕಿಯರ ನಡುವೆ ಬಾಕ್ಸಾಫೀಸ್ ನಲ್ಲಿ ಪೈಪೋಟಿ
  • ಎರಡು ಆ್ಯಕ್ಷನ್​-ಥ್ರಿಲ್ಲರ್ ಸಿನಿಮಾಗಳಾಗಿದ್ದು, ಗೆಲುವು ಯಾರದು ಎಂಬುದೇ ಕೌತುಕ
ಮಧ್ಯಪ್ರಾಚ್ಯ ದೇಶಗಳ ಯುದ್ಧದ ಬಿಸಿ ಭಾರತೀಯ ಚಿತ್ರರಂಗಕ್ಕೂ ತಟ್ಟಿದೆ. ಅದರಲ್ಲೂ ಬಾಲಿವುಡ್ ಚಿತ್ರಗಳಿಗೆ ಕೊಲ್ಲಿ ರಾಷ್ಟ್ರಗಳೂ ಊತ್ತಮ ಮಾರುಕಟ್ಟೆಯಾಗಿರುವ ಕಾರಣ, ಹಲವು ಹಿಂದಿ ಚಿತ್ರಗಳ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಅದರಲ್ಲಿ ಆಲಿಯಾ ಭಟ್, ಶಾರ್ವರಿ ವಾಘ್ ಅಭಿನಯದ ‘ಆಲ್ಫಾ’ ಕೂಡ ಒಂದು. ಮೊದಲು ಘೋಷಿಸಿದಂತೆ ಏ.17ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಯುದ್ಧದಿಂದಾಗಿ ಜುಲೈ 10ಕ್ಕೆ ಪೋಸ್ಟ್ ಪೋನ್ ಆಗಿತ್ತು. ಇದೀಗ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಪ್ರಚಾರಕ್ಕೆ ತೆರಳುವ ಮುಂಚೆ ಚಿತ್ರತಂಡ ರಿಲೀಸ್ ಡೇಟ್‌ನಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಿದೆ. ಜು.10ರ ಬದಲು ಒಂದು ವಾರ ಮುಂಚೆ ಅಂದರೆ, ಜು. 3ಕ್ಕೆ ‘ಆಲ್ಫಾ’ ರಿಲೀಸ್ ಪ್ರಿ-ಪೋನ್ ಮಾಡಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಆದರೆ, ಈ ಪ್ರಿ-ಪೋನ್ ಎಫೆಕ್ಟ್ ಮತ್ತೊಬ್ಬ ಬಾಲಿವುಡ್ ನಟಿ ಹುಮಾ ಖುರೇಷಿಗೆ ತಟ್ಟುತ್ತಿದೆ. ಹೌದು, ಹುಮಾ ಅಭಿನಯಿಸಿ, ನಿರ್ಮಿಸಿರುವ ‘ಬೇಬಿ ಡು ಡೈ ಡು’ ಚಿತ್ರ ಜು.3ಕ್ಕೆ ತೆರೆ ಮೇಲೆ ಬರುವುದಾಗಿ ಘೋಷಿಸಿಕೊಂಡಿದೆ. ಅಂದೇ ಆಲಿಯಾ ಸಿನಿಮಾ ಕೂಡ ಬರುತ್ತಿರುವುದಿಂದ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಆಲಿಯಾ ವರ್ಸಸ್ ಹುಮಾ ಸ್ಪರ್ಧೆ ಏರ್ಪಡಲಿದೆ. ಇನ್ನು ‘ಅಲ್ಫಾ’ ಮತ್ತು ‘ಬೇಬಿ ಡು ಡೈ ಡು’ ಎರಡು ಚಿತ್ರಗಳೂ ನಾಯಕಿ ಪ್ರಧಾನ ಆಕ್ಷನ್-ಥ್ರಿಲ್ಲರ್‌ಗಳಾಗಿದ್ದು, ಹೆಚ್ಚೂ ಕಡಿಮೆ ಒಂದೇ ರೀತಿಯ ಸ್ಟೋರಿಲೈನ್ ಇವೆ. ಹೀಗಾಗಿ ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದೇ ಸದ್ಯದ ಕುತೂಹಲ. ಇನ್ನು ಆಲಿಯಾ ಭಟ್ ಸದ್ಯ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ನಟಿಸುತ್ತಿದ್ದು, ಹುಮಾ ಖುರೇಷಿ ‘ಟಾಕ್ಸಿಕ್’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್