ನ್ಯೂಸ್

ಕೈ ನಾಯಕರಿಗೆ ಕಡೇ ಎಚ್ಚರಿಕೆ : ರಾಜಣ್ಣ, ಶಾಮನೂರು ಕಿವಿ ಹಿಂಡಿದ ದೆಹಲಿ ನಾಯಕರು

Webdesk - Mallikarjun K R

ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಹಿರಿಯ ನಾಯಕರು, ಸಚಿವರ ಹೇಳಿಕೆಯಿಂದ ಪಕ್ಷಕ್ಕಾಗುತ್ತಿರುವ ಮುಜುಗರ ತಪ್ಪಿಸಲು ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ಸಂದೇಶ ರವಾನಿಸಿದೆ.

ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗುವಂತಹ ಹೇಳಿಕೆ ನೀಡಿದ್ದ ಸಹಕಾರ ಸಚಿವ ರಾಜಣ್ಣ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪಗೆ ರಾಹುಲ್ ಗಾಂಧಿ ಆಪ್ತ ದೆಹಲಿ ನಾಯಕರು ದೂರವಾಣಿ ಕರೆ ಮಾಡಿ ತೀವ್ರ ಸ್ವರೂಪದ ಕ್ರಮಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಸಂದೇಶ ನೀಡಿದ್ದಾರೆ.

ನಿಮಗೆ ಟಿಕೆಟ್ ನೀಡಲು, ಚುನಾವಣೆಯಲ್ಲಿ ಗೆಲ್ಲಲು, ಸಚಿವರನ್ನಾಗಿ ಮಾಡಲು ಹೈಕಮಾಂಡ್ ಬೇಕು, ಈಗ ಬೇಡವೇ? ನಿಮ್ಮ ಇತ್ತೀಚಿನ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಸಚಿವರಾಗಿರುವ ನಿಮ್ಮಿಂದ ಪಕ್ಷಕ್ಕೇನು ಕೊಡುಗೆ ಇದೆ ಎಂದು ದೆಹಲಿ ನಾಯಕರು ಕೆ.ಎನ್.ರಾಜಣ್ಣಗೆ ನೇರ ಪ್ರಶ್ನೆ ಹಾಕಿದ್ದಾರೆ. ಹೈಕಮಾಂಡ್ ಶಕ್ತಿ ಏನೆಂದು ತೋರಿಸಬೇಕೇ? ಇನ್ನೊಮ್ಮೆ ಲೂಸ್​ಟಾಕ್ ಮಾಡಿದರೆ ತೀವ್ರ ಸ್ವರೂಪದ ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.

ನಿಗಮ, ಮಂಡಳಿ ನೇಮಕ ವಿಚಾರವಾಗಿ ತಮ್ಮನ್ನು ಪರಿಗಣಿಸಿಲ್ಲ ಎಂದು ಅಸಮಾಧಾನಗೊಂಡಿದ್ದ ಅನೇಕ ಸಚಿವರು ಪಕ್ಷದ ರಾಜ್ಯ ಉಸ್ತುವಾರಿ ಬಗ್ಗೆಯೇ ಅಸಮಾಧಾನ ಹೊರಹಾಕಿದ್ದರು. ಸಚಿವ ರಾಜಣ್ಣ, ನಾವೇನು ಹೈಕಮಾಂಡ್ ಗುಲಾಮರಾ ಎಂದು ಪ್ರಶ್ನಿಸಿದ್ದರು.

ಶಿವಮೊಗ್ಗದಲ್ಲಿ ಶಾಮನೂರು ಶಿವಶಂಕರಪ್ಪ, ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಪುನಃ ಗೆಲ್ಲಿಸಿ ಎಂದು ಕರೆಕೊಟ್ಟಿದ್ದರು. ಇದು ಪಕ್ಷದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ಹೇಳಿಕೆಯಿಂದಲೂ ಹೈಕಮಾಂಡ್ ಅಸಮಾಧಾನಗೊಂಡಿದ್ದು, ದೆಹಲಿ ನಾಯಕರು ಕರೆ ಮಾಡಿ ಅಸಹನೆ ವ್ಯಕ್ತಪಡಿಸಿದ್ದಾರೆ.

ನೀವೇನು ಬಿಜೆಪಿ ವಕ್ತಾರರೇ? ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ನೀವೇಕೆ ಕರೆಕೊಡುತ್ತಿದ್ದೀರಿ? ನೀವು ಹಿರಿಯರಿದ್ದೀರಿ, ನಿಮ್ಮ ಬಗ್ಗೆ ವಿಶೇಷ ಗೌರವ ಇದೆ. ಆದರೆ, ನಿಮ್ಮ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ. ಮುಂದೆ ಇದೇ ಮುಂದುವರಿಸಿದರೆ ಹಿರಿತನ ಮರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.