ಆಲ್ದೂರು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂನಿಂದ ಸ್ವಾತಂತ್ರ್ಯ ದಿನ ಆಚರಿಸಲಾಗಿತ್ತು. ಕಾರ್ಯಕ್ರಮದ ವೇಳೆ ಉತ್ತತಿಯಾಗಿದ್ದ ಕಸ ತೆರವುಗೊಳಿಸದೆ ಹಾಗೇ ಬಿಟ್ಟಿದ್ದರು. ಸೋಮವಾರ ವಿದ್ಯಾರ್ಥಿಗಳು ಕಸ ತೆಗೆದು ಸ್ವಚ್ಛಗೊಳಿಸಿದರು. ಗ್ರಾಪಂ ನಿರ್ಲಕ್ಷೃಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗೆ ಹಾಕಿದ್ದ ತಳಿರು ತೋರಣ, ಬಾಳೆ ಕಂದುಗಳು, ಹೂವಿನ ಹಾರಗಳು ಒಣಗಿದ್ದರೂ ಗ್ರಾಪಂ ಆಡಳಿತ ಅದನ್ನು ತೆಗೆಸಿ ಸ್ವಚ್ಛಗೊಳಿಸಿಲ್ಲ. ಶಾಲಾ ಮಕ್ಕಳು, ಶಿಕ್ಷಕರು ಅದನ್ನು ಸ್ವಚ್ಛಗೊಳಿಸಿದ್ದಾರೆ. ಅಬ್ಬಾಸಿಯ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೊಡುವಾಗ ಆಯೋಜಕರಿಗೆ ಸ್ವಚ್ಛತೆಯ ಜವಾಬ್ದಾರಿ ವಹಿಸಬೇಕು. ಸ್ವಚ್ಛಗೊಳಿಸದಿದ್ದರೆ ಅವರಿಂದ ದಂಡ ವಸೂಲಿ ಮಾಡಿ ಗ್ರಾಪಂನಿಂದ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಅದನ್ನು ವಿದ್ಯಾರ್ಥಿಗಳು, ಶಿಕ್ಷಕರು ಸ್ವಚ್ಛಗೊಳಿಸಬೇಕಾಗುತ್ತದೆ. ಇದನ್ನು ಗ್ರಾಪಂ ಅರಿತುಕೊಳ್ಳಬೇಕು ಎನ್ನುತ್ತಾರೆ ಯಲಗುಡಿಗೆ ಗ್ರಾಮದ ಬಿ.ಪಿ.ಅರವಿಂದ್.
ಅಬ್ಬಾಸಿಯ ರಂಗ ಮಂದಿರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಗ್ರಾಪಂ ಅನುಮತಿ ನೀಡುತ್ತದೆ. ಕಾರ್ಯಕ್ರಮ ನಡೆಸಿದವರು ತಟ್ಟೆ , ಲೋಟ, ನೀರಿನ ಬಾಟಲ್‌ಗಳನ್ನು ಅಲ್ಲಿಯೇ ಬಿಸಾಕಿ ಹೋಗುತ್ತಾರೆ. ಕಸವನ್ನು ವಿದ್ಯಾರ್ಥಿಗಳು, ಶಿಕ್ಷಕರು ಸ್ವಚ್ಛಗೊಳಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.