ನ್ಯೂಯಾರ್ಕ್: ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡ ಸಂಘವು ತುಂಬಾ ಅರ್ಥಪೂರ್ಣವಾಗಿ ವ್ಯಾಲೆಂಟೈನ್ಸ್ - ಡೇ (Valentines Day) ಆಚರಿಸಿತು. ಭಾರತದಲ್ಲಿ "ವ್ಯಾಲೆಂಟೈನ್ಸ್ ಡೇ" ಅಂದರೆ, "ಪ್ರೇಮಿಗಳ ದಿವಸ", ಅಂದು ಹುಡುಗರು ಹುಡುಗಿಯರಿಗೆ ಪ್ರಪೋಸ್ ಮಾಡುವ, ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳುವ ದಿನವೆಂಬ ತಪ್ಪು ಅಭಿಪ್ರಾಯವಿದೆ.
ಇತಿಹಾಸದಲ್ಲಿ "ವ್ಯಾಲೆಂಟೈನ್" ಎಂಬ ಹೆಸರಿನ ಎರಡು ಅಥವಾ ಮೂರು ಜನ ಕ್ರಿಶ್ಚಿಯನ್ ಪಾದ್ರಿಗಳು ಸಿಗುತ್ತಾರೆ. ಇವರಲ್ಲಿ ಅತ್ಯಂತ ಪ್ರಸಿದ್ಧನಾದವನು ಇಟಲಿ ದೇಶದ ರೋಮ್ ನಲ್ಲಿದ್ದ ಸಂತ ವ್ಯಾಲೆಂಟೈನ್. ಇವನು ದಂಪತಿಗಳಿಗೆ ಅದರಲ್ಲೂ ವಿಶೇಷವಾಗಿ ಸಮಾಜದಿಂದ ಬಹಿಷ್ಕಾರಗೊಂಡಿದ್ದ ಸೈನಿಕರಿಗೆ ಗುಪ್ತವಾಗಿ ಮದುವೆ ಮಾಡಿಸುತ್ತಿದ್ದನು. ಈ ವಿಷಯ ತಿಳಿದು ಕೆಂಡಮಂಡಲನಾದ ರಾಜ ಸೀಜರ್ ಕ್ಲಾಡಿಯಸ್ II ಇವನನ್ನು ಸೆರೆಮನೆಗೆ ಹಾಕಿಸಿ ನಂತರ ಫೆಬ್ರವರಿ 14, 269 AD ರಂದು ಶಿರಚ್ಛೇದನ ಮಾಡಿಸಿದನು. ಈ ಸಂತನ ಸ್ಮರಣೆಯ ಪ್ರಯುಕ್ತ ಫೆಬ್ರವರಿ 14ರಂದು "ವ್ಯಾಲೆಂಟೈನ್ಸ್ ಡೇ " ಆಚರಿಸಲಾಗುತ್ತದೆ.
ಆಲ್ಬನಿ ಕನ್ನಡ ಸಂಘಕ್ಕೆ ಹೊಸದಾಗಿ ಅಧ್ಯಕ್ಷರಾಗಿರುವ ಶ್ರೀಮತಿ ಜ್ಯೋತಿ ಧರಣಿ ಮುರುಂಡಿಯವರು ಏನಾದರೂ ಹೊಚ್ಚ ಹೊಸ ನವೀನ ಕಾರ್ಯಕ್ರಮವನ್ನು ಪ್ರಾರಂಭಿಸಬೇಕೆಂಬ ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡಾಗ ಕನ್ನಡ ಸಂಘದ ಕಾರ್ಯಕಾರಿಣಿ ಸಮಿತಿಯು ಹಿಂದೆ ಎಂದು ಮಾಡದಿರದ "ವ್ಯಾಲೆಂಟೈನ್ಸ್ ಡೇ" ಆಯೋಜಿಸಲು ನಿರ್ಧಾರ ಮಾಡಿತು.
ಈ ಕಾರ್ಯಕ್ರಮವನ್ನು ಕೇವಲ ಮದುವೆಯಾಗದ ಪ್ರೇಮಿಗಳಿಗೆ ಮತ್ತು ಮದುವೆಯಾದ ದಂಪತಿಗಳಿಗೆ ಮಾತ್ರ ಸೀಮಿತಗೊಳಿಸದೇ , ಇದರಲ್ಲಿ ಮಕ್ಕಳು ಮತ್ತು ಅಜ್ಜ ಅಜ್ಜಿಯರು ಸಹ ಭಾಗವಹಿಸುವಂತೆ ಮಾಡಿ ಒಂದು ಒಳ್ಳೆಯ ಸಂಪೂರ್ಣ ಫ್ಯಾಮಿಲಿ ಫಂಕ್ಷನ್ ತರ ಆಚರಿಸಲಾಯಿತು. ಕಾರಣ "ಪ್ರೀತಿ" ಎಂದರೆ ಹುಡುಗ ಮತ್ತು ಹುಡುಗಿಯರ ಮಧ್ಯ ಇರುವ ಸಂಬಂಧದ ಸೀಮಿತ ಅರ್ಥವಲ್ಲ. ಇದು ಪ್ರತಿಯೊಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವ, ಅಕ್ಕರೆ, ಕಾಳಜಿ, ಮಾಡುವ ಜವಾಬ್ದಾರಿ.
ಆಲ್ಬನಿ ಕನ್ನಡ ಸಂಘದ ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಮೂರ್ನಾಲ್ಕು ವರ್ಷದ ಚಿಕ್ಕ ಮಕ್ಕಳಿಂದ ಹಿಡಿದು 87 ವರ್ಷದ ಅಜ್ಜಿಯು ಸಹಿತ ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ಪ್ರವೀಣ್ ರಾವ್ ಅವರ 87 ವರ್ಷದ ತಾಯಿ ಮತ್ತು 85 ವರ್ಷದ ಅತ್ತೆ ಇಬ್ಬರು ಸಹಿತ ತುಂಬಾ ಉತ್ಸಾಹದಿಂದ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಅನೇಕ ಗೇಮ್ಸ್ ಗಳನ್ನು, ಡಾನ್ಸ್ ಗಳನ್ನು, ಹಾಡುಗಳನ್ನು ಆಯೋಜಿಸಲಾಗಿತ್ತು ಬೆಂಕಿ ಬಸಣ್ಣ ನಡೆಸಿಕೊಟ್ಟ "ಟ್ರಿಕಿ ಪ್ರಶ್ನೆಗಳು" ಸ್ಪರ್ಧೆ ಎರಡು ಬಣಗಳು ಕಿತ್ತಾಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಸುಚಿತಾ ಜಾಜು ಕಾರ್ಯಕ್ರಮದ ನಿರ್ವಹಣೆಯನ್ನು ತುಂಬಾ ಅಚ್ಚಾಗಿ ನಡೆಸಿಕೊಟ್ಟರು. ಬೃಂದಾ, ಚೈತಾಲಿ, ಅಲ್ಪ ಗೌಡ , ಸೌಮ್ಯ, ಶ್ಯಾಮ್, ಮುಂತಾದವರು ತಮ್ಮ ಮಧುರ ಗಾಯನದಿಂದ ಎಲ್ಲರ ಮನಸುರೆಗೊಂಡರು. ಸುಚಿತಾ ಜಾಜು, ಉಮಾ ಬೆಂಕಿ ಮತ್ತು ದೀಪಾ ಅಭಿಷೇಕ್ ದಂಪತಿಗಳಿಗೆ ಫನ್ ಗೇಮ್ಸ್ ಆಯೋಜಿಸಿದ್ದರು. ಡಿಜೆಯಾಗಿ ದೀಪಾ ಪ್ರದೀಪ್ ಮಿಂಚಿದರು ಮತ್ತು ಎಲ್ಲರನ್ನು ಕುಣಿಸಿದರು. ಡಾ. ಸೌಮ್ಯ & ಡಾ. ರಾಹುಲ್, ದೀಪ & ಅಭಿಷೇಕ್, ಚೈತಾಲಿ & ಅಜಯ್, ಬೃಂದಾ & ನಕುಲ್ ಹೀಗೆ ಅನೇಕ ಜೋಡಿಗಳು ಮಾಡಿದ ನೃತ್ಯಗಳು ಸೂಪರ್ ಆಗಿದ್ದವು.
ಸಂಜೆಯ ತಿಂಡಿ ಮತ್ತು ಕಾರ್ಯಕ್ರಮದ ನಂತರ ಡಿನ್ನರ್ ತುಂಬಾ ರುಚಿಕರವಾಗಿದ್ದವು. ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಸಹಿತ ಕುಣಿದು ಕುಪ್ಪಳಿಸಿದರು. ಈ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಕನ್ನಡಿಗರು ಮಾತ್ರವಲ್ಲದೇ, ಮರಾಠಿಗರು, ತೆಲುಗಿನವರು, ಹಿಂದಿಯವರು ಭಾಗವಹಿಸಿದ್ದರು. ಇಲ್ಲಿರುವ ಟ್ರೈಸಿಟಿ ಇಂಡಿಯನ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟ್ ತುಮು ತಮ್ಮ ಪತ್ನಿಯೊಂದಿಗೆ ಭಾಗವಹಿಸಿದ್ದರು. ಎಲ್ಲರೂ ನಮ್ಮ ಕನ್ನಡ ಸಂಘವನ್ನು ಕೊಂಡಾಡಿದ್ದೇ ಕೊಂಡಾಡಿದ್ದು! ಒಟ್ಟಿನಲ್ಲಿ ಹಳಬರು ಮತ್ತು ಹೊಸಬರು, ಚಿಕ್ಕವರು ಮತ್ತು ವೃದ್ಧರು, ಸಿಂಗಲ್ಸ್ ಮತ್ತು ಕಪಲ್ಸ್ .. ಹೀಗೆ ಎಲ್ಲರೂ ಒಟ್ಟಾಗಿ "ಪ್ರೀತಿ" ಯ ಸಂಕೇತವಾದ ವ್ಯಾಲೆಂಟೈನ್ಸ್ ಡೇ ಯನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಲ್ಬನಿಯಲ್ಲಿ ಆಚರಿಸಿದರು.