ನ್ಯೂಸ್

ರಕ್ತದಾನ ಇನ್ನೊಂದು ಜೀವ ಉಳಿಸು ಪುಣ್ಯದ ಕಾರ್ಯ; ಶಿವಾನಂದ ಮಾಳಗಿ


ರಾಣೆಬೆನ್ನೂರ: ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಿದರೆ ನಿಮಗೆ ಪುಣ್ಯದ ಫಲ ಸಿಗುತ್ತದೆ ಎಂದು ಅಂತರವಳ್ಳಿ ಗ್ರಾಪಂ ಅಧ್ಯಕ್ಷ ಶಿವಾನಂದ ಮಾಳಗಿ ಹೇಳಿದರು.
ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಸುಣಕಲ್ಲಬಿದರಿ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ ಸಾಕಷ್ಟು ಪ್ರಮಾಣದಲ್ಲಿ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ದೊರೆಯದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಿಗಳನ್ನು ಉಳಿಸಲು ರಕ್ತದಾನ ಮಾಡುವುದು ಅವಶ್ಯವಾಗಿದೆ ಎಂದರು.
ಪ್ರಾಚಾರ್ಯ ಆರ್.ಎಫ್. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. 35 ಜನರು ರಕ್ತದಾನ ಮಾಡಿದರು.
ಜಿಲ್ಲಾ ರಕ್ತನಿಧಿ ಕೇಂದ್ರದ ಅಧಿಕಾರಿ ಬಸವರಾಜ ಕಮತದ, ಉಪನ್ಯಾಸಕ ಬಸವರಾಜ ಹುಗ್ಗಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಯಮುನಾ ನಾಯ್ಕ, ಡಾ. ಶಿದ್ದರಾಮಪ್ಪ ಮಲ್ಲಿಗಾರ ಮತ್ತಿತರರು ಇದ್ದರು.