ಬೆಂಗಳೂರು : ಉಗ್ರ ಸಂಘಟನೆ ಅಲ್-ಖೈದಾ (ಎಕ್ಯೂಐಎಸ್) ಮತ್ತು ತೆಹರಿಕ್-ಇ-ತಾಲಿಬಾನ್‌ಗೆ ಯುವಕರ ನೇಮಕಾತಿಯಲ್ಲಿ ತೊಡಗಿದ್ದ ಶಂಕಿತರ ಅಡಗುತಾಣಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದೆ.
ದೇಶದಲ್ಲಿ ಉಗ್ರ ಸಂಘಟನೆ ಬಲಗೊಳಿಸಲು ಯುವಕರನ್ನು ನೇಮಿಸಿ ಭಾರತದಲ್ಲಿ ಅಲ್-ಖೈದಾ (ಎಕ್ಯೂಐಎಸ್) ಉಪಖಂಡದಲ್ಲಿ ಮತ್ತು ತೆಹರಿಕ್-ಇ-ತಾಲಿಬಾನ್ ಸ್ಥಾಪಿಸಲು ಸಂಚು ರೂಪಿಸಿದ್ದರು. ಇದರ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಎನ್‌ಐಎ, ಗುರುವಾರ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಕೆಲವೆಡೆ ದಾಳಿ ನಡೆಸಿದೆ.
ಮಹಾರಾಷ್ಟ್ರದ ಮೂರು ಸ್ಥಳಗಳಲ್ಲಿ ಮತ್ತು ಇತರ ಮೂರು ರಾಜ್ಯಗಳಲ್ಲಿ ತಲಾ 1 ಸ್ಥಳದಲ್ಲಿ ಶೋಧ ನಡೆಸಿದ್ದು, ವಿವಿಧ ಬಗೆಯ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿತೂರಿಯಲ್ಲಿ ಭಾಗಿ ಆಗಿರುವವರನ್ನು ಪತ್ತೆಹಚ್ಚಲು ಮತ್ತು ಈ ಎರಡು ಉಗ್ರ ಸಂಘಟನೆಗಳ ಕಾನೂನುಬಾಹಿರ ಚಟುವಟಿಕೆಗಳು ಸುಳಿವು ಮತ್ತು ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ತಡೆಯಲು ಈ ಡಿಜಿಟಲ್ ಸಾಕ್ಷ್ಯಗಳು ಉಪಯೋಗಕ್ಕೆ ಬರಲಿವೆ ಎಂದು ಎನ್‌ಐಎ ತಿಳಿಸಿದೆ.
ನಿಷೇಧಿತ ಸಂಘಟನೆಗಳಿಂದ ನೇಮಕಗೊಂಡ ಇಬ್ಬರು ಶಂಕಿತರ ವಿರುದ್ಧ 2023ರ ಏಪ್ರಿಲ್ನಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಮುಂದುವರಿದ ತನಿಖೆ ಭಾಗವಾಗಿ ದಾಳಿ ನಡೆಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಭೂಮಿ ಖರೀದಿಸಲು ವಿದೇಶಕ್ಕೆ ಹಣ ವರ್ಗಾವಣೆ ಸೇರಿದಂತೆ ಭಯೋತ್ಪಾದಕ ಸಂಬಂಧಿತ ಸರಣಿ ಚಟುವಟಿಕೆಗಳಲ್ಲಿ ಈ ಇಬ್ಬರು ಭಾಗಿಯಾಗಿದ್ದರು.
ಭಾರತದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆಗಳ ಚಟುವಟಿಕೆಗಳನ್ನು ಮುಂದುವರಿಸಲು ಯುವಕರ ನೇಮಕಾತಿ ಮಾಡುವಲ್ಲಿ ಭಾಗಿಯಾಗಿದ್ದರು. ಭಾರತದ ವಿರುದ್ಧ ಸಂಚುರೂಪಿಸುವುದು ಮತ್ತು ಉಗ್ರವಾದ ಹರಡಿ ಶಾಂತಿ ಮತ್ತು ಕೋಮು ಸೌಹಾರ್ದತೆ ಭಂಗಗೊಳಿಸುವ ಗುರಿಯಾಗಿತ್ತು.
ಎಕ್ಯೂಐಎಸ್ ಭಾರತೀಯ ಉಪಖಂಡದಲ್ಲಿ ಇಸ್ಲಾಮಿಕ್ ರಾಜ್ಯ ಮತ್ತು ಇಸ್ಲಾಮಿಕ್ ಕ್ಯಾಲಿಫೇಟ್ ಸ್ಥಾಪಿಸಲು ಶ್ರಮಿಸುತ್ತಿರುವ ಉಗ್ರಗಾಮಿ ಸಂಘಟನೆ ಆಗಿದ್ದರೆ, ತೆಹರಿಕ್-ಇ-ತಾಲಿಬಾನ್ ಅಫ್ಘಾನ್ ಮತ್ತು ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಸ್ಲಾಮಿಕ್ ಸಶಸ್ತ್ರ ಉಗ್ರಗಾಮಿ ಗುಂಪುಗಳನ್ನು ಒಳಗೊಂಡ ಸಂಘಟನೆಯಾಗಿದೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.