1. ಸರ್ವಸ್ತೋತ್ರಗಳೂ ಅಲ್ಲಾಹನಿಗೆ ಸಲ್ಲುತ್ತವೆ. ಆತನು ಸರ್ವ ಲೋಕಗಳ ಪ್ರಭು. 2. ಆತನು ಪರಮದಯಾಳು, ದಾಕ್ಷಿಣ್ಯಮಯ. 3. ಮಾಡಿದ ಕರ್ಮಕ್ಕೆ ಪ್ರತಿಫಲ ದಿನದ ಅಧಿಪತಿ ಆತ. 4. ನಿನ್ನನ್ನೇ ನಾವು ಸೇವಿಸುವೆವು ಮತ್ತು ನಿನ್ನ ನೆರವನ್ನೇ ನಾವು ಬೇಡುವೆವು. 5. ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸು. 6. ನೀನು ಯಾರ ಮೇಲೆ ವರಗಳನ್ನು ಕರುಣಿಸಿರುವೆಯೋ ಅವರ ಮಾರ್ಗದಲ್ಲಿ ನನ್ನನ್ನು ನಡೆಸು. 7. ಯಾರು ದಾರಿ ತಪ್ಪಿ ಹೋಗಿರುವರೋ ಅಂತಹವರ ಹಾಗೆ ನಾನು ಆಗದಂತೆ ನನ್ನನ್ನು ಕಾಪಾಡು. ಸಾರ್ವಕಾಲಿಕ, ಸಾರ್ವತ್ರಿಕ, ಅರ್ಥಪೂರ್ಣ, ಅತ್ಯಪೂರ್ವ ಮಾತುಗಳನ್ನು ಇಲ್ಲಿ ನೋಡಬಹುದು. ಕುರಾನಿನ 12ನೇ ಅಧ್ಯಾಯದ ಮಾತುಗಳು ಸರ್ವಜನತೆಗೂ ಅನ್ವಯಿಸುತ್ತವೆ.
ಅಲ್ ಇಖ್ಲಾಸ್: ಏಕಂಸತ್/ ಕುಲ್ಹುವಲ್ಲಾಹು ಅಹದ್, ಅಲ್ಲಾಹು ಸಮದ್/ಲಂಯಲಿದ್, ವಲಂ ಯೂಲದ್/ ವಲಂಯ ಕುಲ್ಲಹು, ಕುಫುವನ್ ಅಹದ್/ಹೇಳು: ಆತ ಅಲ್ಲಾಹ್(ದೇವರು), ಒಬ್ಬನೇ. ಸರ್ವರೂ ಆ ದೇವರನ್ನೇ ಅವಲಂಬಿಸುತ್ತಾರೆ. ಆತನಿಗೆ ಮಕ್ಕಳಿಲ್ಲ, ತಂದೆ ಇಲ್ಲ. ಲಾ ಇಲಾಹ, ಇಲ್ಲಲಾಹು, ಮೊಹಮ್ಮದರ್ ರಸೂಲುಲ್ಲಾಹ್- ದೇವರು(ಅಲ್ಲಾಹ್) ಒಬ್ಬನೇ. ಆತ ಅಲ್ಲಾಹ್.
ಮುಹಮ್ಮದರು(ಸ) ಆತನ ಪ್ರವಾದಿ. ಪ್ರವಾದಿ ಮುಹಮ್ಮದರ(ಸ) ಹತ್ತಿರ ಯಾರೋ ಬಂದು ಕೇಳಿದರು. ಒಳ್ಳೆಯದು ಯಾವುದು? ಕೆಟ್ಟದು ಯಾವುದು? ಪ್ರವಾದಿ(ಸ) ತಮ್ಮ ಬೆರಳುಗಳಿಂದ ಪ್ರಶ್ನೆ ಕೇಳುವವರ ಎದೆಯನ್ನು ಮುಟ್ಟಿ, ಆ ಪ್ರಶ್ನೆಯನ್ನು ನಿಮ್ಮ ಎದೆಯೊಳಗೆ ಕೇಳಿಕೋ ಎಂದರು. ಹೀಗೆ ಅದನ್ನೇ ಮೂರು ಬಾರಿ ಹೇಳಿ,ಹೇಳಿ ಯಾವುದರಿಂದ ಹೃದಯವು ಸ್ಥಿರವಾಗಿರುತ್ತದೆಯೋ? ಶಾಂತವಾಗಿ ರುತ್ತದೆಯೋ? ಅದು ಒಳ್ಳೆಯದು. ಯಾವುದರಿಂದ ಇತರರು ಏನೂ ಅನ್ನದಿದ್ದರೂ ನಿಮ್ಮ ಹೃದಯದಲ್ಲಿಯೇ ಶಂಕೆಗಳು ಉಂಟಾಗುತ್ತವೆಯೋ ಅದು ಕೆಟ್ಟದ್ದು ಎಂದರು. (ಹದೀಸ್-ವಚನ-ಪ್ರವಾದಿ)