ಶಿವಮೊಗ್ಗ ಗಾಂಧಿ ಬಜಾರ್‌ನ ಚಿನ್ನಾಭರಣ ಮಾರಾಟ ಮಳಿಗೆಯೊಂದರಲ್ಲಿ ಶುಕ್ರವಾರ ಅಕ್ಷಯ ತೃತೀಯಾ ಅಂಗವಾಗಿ ಚಿನ್ನಾಭರಣ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು.  
ನ್ಯೂಸ್

ಚಿನ್ನಾಭರಣ ವಹಿವಾಟು ಹೆಚ್ಚಿಸಿದ ಅಕ್ಷಯ ತೃತೀಯಾ

ಶಿವಮೊಗ್ಗ: ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಚಿನ್ನಾಭರಣ ವ್ಯಾಪಾರಿಗಳ ಖುಷಿ ಅಕ್ಷಯವಾಗಿದೆ. ಒಂದೇ ದಿನ ವಹಿವಾಟು 8 ಕೋಟಿ ರೂ. ಗಡಿ ದಾಟಿದೆ ಎಂಬ ಅಂದಾಜಿದೆ. ಕಳೆದ ಎರಡು ವರ್ಷಗಳಿಂದ ಅಕ್ಷಯ ತೃತೀಯಾದಲ್ಲಿ ವಹಿವಾಟು ನಿರೀಕ್ಷೆ ಮೀರಿಸುತ್ತಿದೆ. ಈ ಬಾರಿ ವ್ಯಾಪಾರ ಅತ್ಯುತ್ತಮವಾಗಿದೆ ಎಂದು ಚಿನ್ನಾಭರಣ ವ್ಯಾಪಾರಿಯೊಬ್ಬರು ಹರ್ಷ ವಕ್ತಪಡಿಸಿದ್ದಾರೆ.

ಆನ್‌ಲೈನ್ ಮೂಲಕ ಚಿನ್ನದ ಖರೀದಿಗೆ ಅವಕಾಶವಿತ್ತು. ಆದರೆ ಇದು ಕೆಲವೇ ಕಾರ್ಪೋರೇಟ್ ಚಿನ್ನಾಭರಣ ಮಳಿಗೆಗೆ ಸೀಮಿತವಾಗಿತ್ತು. ಕಾರ್ಪೋರೇಟ್ ಕಂಪನಿಗಳನ್ನೂ ಹೊರತುಪಡಿಸಿದ ಚಿಕ್ಕಪುಟ್ಟ ವ್ಯಾಪಾರಿಗಳು ಈ ಬಾರಿ ಉತ್ತಮ ವಹಿವಾಟಿನಿಂದ ಖುಷಿಯಾಗಿದ್ದಾರೆ.
ಕೆಲವು ಕಾರ್ಪೋರೇಟ್ ಕಂಪನಿಗಳ ಚಿನ್ನಾಭರಣ ಮಳಿಗೆಯಲ್ಲಿ ಖರೀದಿ ಮೇಲೆ ವಿಶೇಷ ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಕೆಲವು ಆಭರಣ ಮಳಿಗೆಗಳಲ್ಲಿ ಗ್ರಾಹಕರಿಗೆಂದು ತಂಪು ಪಾನೀಯ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ನೆಹರು ರಸ್ತೆ, ಗಾಂಧಿ ಬಜಾರ್, ದುರ್ಗಿಗುಡಿ, ಬಾಲರಾಜ ಅರಸ್ ರಸ್ತೆ ಮುಂತಾದೆಡೆ ಚಿನ್ನಾಭರಣ ಅಂಗಡಿಗಳಿಗೆ ದಿನವಿಡೀ ಗ್ರಾಹಕರು ಆಗಮಿಸುತ್ತಿದ್ದರು. ಆಭರಣಗಳ ಹೊಸ ಡಿಸೈನ್ ಸೇರಿ ತಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಚಿನ್ನಾಭರಣ ಖರೀದಿಯಲ್ಲಿ ಗ್ರಾಹಕರು ಆಸಕ್ತಿ ತೋರಿದರು.
ಇತರ ವಹಿವಾಟೂ ಉತ್ತಮ: ಅಕ್ಷಯ ತೃತೀಯಾ ಸಂದರ್ಭದಲ್ಲಿ ಏನಾದರೂ ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎಂಬುದು ನಂಬಿಕೆ. ಹೀಗಾಗಿ ಚಿನ್ನಾಭರಣ, ಬೆಳ್ಳಿ ವಸ್ತುಗಳ ಖರೀದಿಗೆ ಮುಂದಾಗುವವರು ಹೆಚ್ಚು. ಇನ್ನು ಕೆಲವರು ಹೊಸ ವಾಹನ, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳ ಖರೀದಿಗೆ ಒಲವು ತೋರುತ್ತಾರೆ. ಈ ಬಾರಿ ಇವುಗಳ ಖರೀದಿ ಗಣನೀಯ ಏರಿಕೆ ಆಗಿರುವುದು ವಿಶೇಷ.
200 ಆಭರಣದ ಅಂಗಡಿ:ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್, 8 ಕಾರ್ಪೋರೇಟ್ ಸಂಸ್ಥೆಗಳಿವೆ. ಎರಡು ಸಾವಿರಕ್ಕೂ ಅಧಿಕ ಆಭರಣ ತಯಾರಕರು ಇದ್ದಾರೆ. ಕರೊನಾ ಲಾಕ್‌ಡೌನ್ ಸಂದರ್ಭ ಚಿನ್ನಾಭರಣ ಮಾರಾಟಗಾರರು ಹಾಗೂ ತಯಾರಕರ ಬದುಕಲ್ಲಿ ಕತ್ತಲು ಆವರಿಸಿತ್ತು. ಆದರೆ ಈ ಬಾರಿ ಅಕ್ಷಯ ತೃತೀಯಾ ಚಿನ್ನಾಭರಣ ವಹಿವಾಟು ಹೊಳಪನ್ನು ಹೆಚ್ಚಿಸಿದೆ.