ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ನಟಿಸಿರುವ ಸರ್ಫಿರಾ ಮತ್ತು ಬಡೇ ಮಿಯಾನ್ ಛೋಟೆ ಮಿಯಾನ್ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾದ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಫ್ಲಾಪ್ ಆಗಿವೆ. ಈ ಬಗ್ಗೆ ಅಕ್ಷಯ್, ಸಿನಿಮಾದಲ್ಲಿನ ನಟನೆ ಕಳಪೆಯಾಗಿದೆ ಎಂಬ ಕಾರಣಕ್ಕಾಗಿ ಜನರು ನನ್ನನ್ನು ತಿರಸ್ಕರಿಸುತ್ತಿದ್ದಾರೆ ಎಂಬುದು ಅಸಂಬದ್ಧವಾಗಿದೆ ಎಂದು ಹೇಳಿದರು.
ಇದನ್ನು ಓದಿ: ಪ್ಯಾರಿಸ್ ಒಲಿಂಪಿಕ್ಸ್ 2024: 25 ಮೀ. ಪಿಸ್ತೂಲ್ ಶೂಟಿಂಗ್ನಲ್ಲಿ ಗೆದ್ದು ಫೈನಲ್ಗೆ ಲಗ್ಗೆ ಇಟ್ಟ ಮನು ಭಾಕರ್
ತಮ್ಮ ಮುಂದಿನ ಸಿನಿಮಾ ಖೇಲ್ ಖೇಲ್ ಮೇ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಕ್ಷಯ್, ನನ್ನ ನಾಲ್ಕೈದು ಸಿನಿಮಾಗಳು ಚೆನ್ನಾಗಿ ಮೂಡಿಬರಲಿಲ್ಲ. ಅದಕ್ಕೆ ಸಾರಿ ಮ್ಯಾನ್, ಡೋಂಟ್ ವರಿ ಎಂಬ ಸಂದೇಶಗಳು ಬರುತ್ತಿವೆ. ನಾನು ಸತ್ತಿಲ್ಲ! ಸಂದೇಶಗಳ ಮೂಲಕ ಸಂತಾಪ ಸೂಚಿಸಿದಂತೆ ಜನರು ನನಗೆ ಸಂತಾಪ ಸಂದೇಶಗಳನ್ನು ಕಳುಹಿಸುತ್ತಿರುವಂತೆ ತೋರುತ್ತಿದೆ ಎಂದಿದ್ದಾರೆ.
ಒಬ್ಬ ಪತ್ರಕರ್ತ ಚಿಂತಿಸಬೇಡಿ, ನೀವು ಹಿಂತಿರುಗಿ ಬರುತ್ತೀರಿ ಎಂದು ಬರೆದಿದ್ದಾರೆ. ನಾನು ಅವರನ್ನು ಕರೆದು ನೀವು ಇದನ್ನು ಏಕೆ ಬರೆಯುತ್ತಿದ್ದೀರಿ? ಹಿಂದಿರುಗಿ ಬರುತ್ತೀರಿ ಎಂದರೆ ನಾನು ಎಲ್ಲಿಗೆ ಹೋಗಿದ್ದೆ ಎಂದು ಕೇಳಿದೆ. ನಾನು ಇಲ್ಲಿದ್ದೇನೆ ಮತ್ತು ಕೆಲಸ ಮಾಡುತ್ತೇನೆ. ಜನರು ಏನೇ ಹೇಳಿದರೂ ನಾನು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ನಾನು ಬೆಳಗ್ಗೆ ಎದ್ದು ವ್ಯಾಯಾಮ ಮಾಡಿ, ಕೆಲಸಕ್ಕೆ ಹೋಗಿ ಮನೆಗೆ ಹಿಂತಿರುಗುತ್ತೇನೆ. ನಾನು ಹಣ ಸಂಪಾದಿಸಲು ಕಷ್ಟಪಡುತ್ತೇನೆ. ನಾನು ಯಾರನ್ನೂ ಸಹಾಯಕ್ಕಾಗಿ ಕೇಳುವುದಿಲ್ಲ. ಅವರು ನನ್ನನ್ನು ಹೊಡೆದುರುಳಿಸುವವರೆಗೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಹೇಳಿದರು.
ಖೇಲ್ ಖೇಲ್ ಮೇ ಸಿನಿಮಾ ಆಗಸ್ಟ್ 15 ರಂದು ತೆರೆಗೆ ಅಪ್ಪಳಿಸಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಸೇರಿ ವಾಣಿ ಕಪೂರ್, ಆಮಿ ವಿರ್ಕ್, ತಾಪ್ಸಿ ಪನ್ನು, ಫರ್ದೀನ್ ಖಾನ್, ಆದಿತ್ಯ ಸೀಲ್ ಮತ್ತು ಪ್ರಜ್ಞಾ ಜೈಸ್ವಾಲ್ ಬಹುತಾರಾಗಣವಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಾವ ರೀತಿ ಮೋಡಿ ಮಾಡಲಿದೆ ಕಾದುನೋಡಬೇಕಿದೆ. (ಏಜೆನ್ಸೀಸ್)