ಅಕ್ರೂರ ಶ್ರೀಕೃಷ್ಣನಲ್ಲಿ ಬೇಡುವ ಪರಿ ನೋಡಿ. ನಾನು ಪುಣ್ಯ ಮಾಡಿಲ್ಲವೆಂದು ನನಗೆ ಶಿಕ್ಷೆ ಕೊಡುವುದಾದರೆ ನನ್ನನ್ನು ಮೂಕನನ್ನಾಗಿ ಮಾಡು ಎಂದು. ನಿನ್ನ ಪ್ರೀತಿಗಾಗಿ ದೇವಸ್ಥಾನಗಳಿಗೆ ಹೋಗುವುದಾಗಲಿ, ತೀರ್ಥಯಾತ್ರೆಗಳಿಗೆ ಹೋಗುವುದಾಗಲಿ, ಇನ್ಯಾವುದೇ ಸತ್ಕಾರ್ಯ ಮಾಡುವುದಕ್ಕೆ ನಡೆಯುವುದಾಗಲಿ ಬಿಟ್ಟು, ಇನ್ಯಾವುದೋ ಕೆಟ್ಟ ಕೆಲಸಕ್ಕೆ, ದುರುದ್ದೇಶಗಳಿಗೆ ನನ್ನ ಕಾಲುಗಳು ಏಳುತ್ತವೆ ಅಂದರೆ ಅಂತಹ ಸಂದರ್ಭಗಳಲ್ಲಿ ನನ್ನ ಕಾಲುಗಳು ಕುಂಟು ಆಗಲಿ ಅರ್ಥಾತ್ ಕೆಟ್ಟ ಕೆಲಸಗಳಿಗೆ ಕಾಲುಗಳು ಮೇಲೆ ಏಳದೇ ಇರುವಂತೆ ಆಗಲಿ.
ಅದೇ ರೀತಿ ದುಷ್ಟ ಕಾರ್ಯಗಳನ್ನು ಮಾಡುವುದಕ್ಕೆ ಕೈಗಳು ಇಲ್ಲದೇ ಇದ್ದ ಹಾಗೆ ನಾನು ಅಂಗವಿಕಲನಾಗಿ ಒದ್ದಾಡುವಂತೆ ಮಾಡು, ಗ್ರಾಮ್ಯವಾದ ಸುಖವನ್ನು ಅನುಭವಿಸುವ ವಿಷಯದೊಳಗೆ ನಪುಂಸಕನನ್ನಾಗಿ ಮಾಡು ಎಂಬುದಾಗಿ ಪ್ರಾರ್ಥನೆ ಮಾಡುತ್ತಾನೆ. ನಮ್ಮ ಇಂದ್ರಿಯಗಳೆಲ್ಲವೂ ಭಗವಂತನ ದಾಸ್ಯಕ್ಕೆ ಉಪಯುಕ್ತವಾದಾಗ ಸಾರ್ಥಕ ಇಲ್ಲದೇ ಇದ್ದರೆ ಅವುಗಳು ವ್ಯರ್ಥ, ವ್ಯರ್ಥವಾದ ಇಂದ್ರಿಯಗಳು ಇದ್ದು ಏನು ಪ್ರಯೋಜನ? ಅಂಥವುಗಳನ್ನು ನನಗೆ ಕೊಡುವುದು ಬೇಡ ಎಂದು. ಅದನ್ನು ಕೇಳುವ ರೀತಿ ಹೇಗೆ ಅಂದರೆ ನಾನು ಪುಣ್ಯ ಮಾಡಿಲ್ಲ ಅನ್ನುವುದಕ್ಕೆ ನನಗೆ ಶಿಕ್ಷೆ ಕೊಡುವುದಾದರೆ ಹೀಗೆ ಶಿಕ್ಷೆಗಳನ್ನು ಕೊಡು ಎಂದು.
ಅರ್ಥಾತ್ ಅನುಗ್ರಹ ಮಾಡು ಎಂದು ಕೇಳುವುದನ್ನು ಈ ರೀತಿಯಾಗಿ ಕೇಳುತ್ತಿದ್ದಾನೆ. ಇನ್ನು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ಕೊಡು ಎಂದರೆ ಅಖಂಡವಾಗಿ ನಿನ್ನ ಪಾದಕಮಲಗಳನ್ನು ಅರ್ಚನೆ ಮಾಡುವಂತಹ ಒಂದು ಕಾಮ, ಕಾಮ ಅಂದರೆ ಇಚ್ಛೆ , ಇಚ್ಛೆ ಎನ್ನುವುದು ಕೆಟ್ಟದ್ದು ಅಲ್ಲ. ಕೆಟ್ಟದನ್ನು ಇಚ್ಛೆ ಮಾಡಿದರೆ ಮಾತ್ರ ಕೆಟ್ಟದ್ದು, ಒಳ್ಳೆಯದನ್ನು ಇಚ್ಛೆ ಮಾಡಿದರೆ ಕಾಮವೂ ಒಳ್ಳೆಯದೆ ಆಗಿರುತ್ತದೆ. ಹೀಗೆ ಅಕ್ರೂರ ಬೇಡುತ್ತಿದ್ದಾನೆ. ಆ ಅಕ್ರೂರ ಭಗವಂತನನ್ನು ಕಾಣಲು ಹೊರಡುತ್ತಾನೆ. ಆತನಿಗೆ ಆನಂದವೋ ಆನಂದ.