ನ್ಯೂಸ್

ಅಕ್ರಮ ನಡೆದಿದ್ದರೆ ಮುಲಾಜಿಲ್ಲದೆ ಕ್ರಮ: ರಾಷ್ಟ್ರೀಯ ಆಯೋಗದ ಅಧ್ಯಕ್ಷ ವೆಂಕಟೇಶನ್ ಎಚ್ಚರಿಕೆ

Kolar

 ಕೋಲಾರ :  2017-18ನೇ ಸಾಲಿನಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಮಂಡಳಿಯಿಂದ ಮಂಜೂರಾಗಿರುವ ಅನುದಾನದ 2ನೇ ಕಂತಿನ ಹಣ ಫಲಾನುಭವಿಗಳಿಗೆ ಸಿಗದಿರುವ ಬಗ್ಗೆ ತನಿಖೆ ನಡೆಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸುವುದಾಗಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಫಾಯಿ ಕರ್ಮಚಾರಿಗಳ ಪುನರ್ವಸತಿಗೆ ಅಭಿವೃದ್ಧಿ ಮಂಡಳಿಯಿಂದ 2017-18ನೇ ಸಾಲಿಗೆ 80 ಕೋಟಿ ರೂ. ಮಂಜೂರಾಗಿತ್ತು. ಕೆಲ ಫಲಾನುಭವಿಗಳಿಗೆ ಮೊದಲ ಕಂತು ಮಂಜೂರಾಗಿತ್ತು. ಆದರೆ ಮಂಡಳಿ ಎಂಡಿ ನಾಗರಾಜಪ್ಪ ಹಾಗೂ ಅಧಿಕಾರಿ ಗಣೇಶಪ್ಪ ನಡುವಿನ ಕಿತ್ತಾಟದಿಂದ ಬಾಕಿ ಹಣ ಬಿಡುಗಡೆಯಾಗಲಿಲ್ಲ ಎಂದು ಫಲಾನುಭವಿಗಳಾದ ಡೇವಿಡ್ ಇತರರು ಸಭೆಯ ಗಮನಕ್ಕೆ ತಂದಾಗ ಸ್ಪಂದಿಸಿದ ಅಧ್ಯಕ್ಷರು, ಅಕ್ರಮ ನಡೆದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗವು ಸಂವಿಧಾನಕ್ಕೆ ಒಳಪಟ್ಟಿದೆ. ಆಯೋಗದ ತೀರ್ಮಾನ ಜಾರಿ ಮಾಡದಿದ್ದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವ ಅಧಿಕಾರವಿದೆ. ದಲಿತರಿಗೆ ಗೌರವ ನೀಡುವುದನ್ನು ಕಲಿತುಕೊಳ್ಳಬೇಕು. ಗೌರವ ನೀಡದಿದ್ದರೆ ಅಟ್ರಾಸಿಟಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದರು.

ಪೌರಕಾರ್ಮಿಕರು ಇಲ್ಲದಿದ್ದರೆ ನಗರ ಸ್ವಚ್ಛವಾಗಿರುವುದಿಲ್ಲ. ಪ್ರಸ್ತುತ 20 ರೂ.ಗೆ ನೀಡುತ್ತಿರುವ ಉಪಾಹಾರವನ್ನು 50 ರೂ.ಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು, ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೂ ಪ್ರತಿವರ್ಷ 2 ಜತೆ ಸಮವಸ್ತ್ರ ನೀಡಬೇಕು, ಎಲ್ಲ ಪೌರ ಕಾರ್ಮಿಕರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದಡಿ ನೋಂದಣಿ ಮಾಡಿಸಿ ಕಾರ್ಡ್ ವಿತರಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ರಾಜ್ಯ ಸಫಾಯಿ ಕರ್ಮಚಾರಿ ಮಂಡಳಿ ರಚನೆ ಮಾಡಿ 5 ವರ್ಷ ಕಳೆದಿದೆ. 2017-18ನೇ ಸಾಲಿನಲ್ಲಿ 80 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಕೋಲಾರ ಜಿಲ್ಲೆಗೆ ನೀಡಲಾಗಿದೆ. ನಾನು ಅಧ್ಯಕ್ಷರಾಗಿ 8 ತಿಂಗಳ ಅವಧಿಯಲ್ಲಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದರೂ ಪರಿಹಾರ ಸಿಕ್ಕಿಲ್ಲ, ಮಂಡಳಿಯಲ್ಲಿ ಹಣ ಇಲ್ಲ. ಈ ಸಾಲಿನಲ್ಲಿ ಜಿಲ್ಲೆಗೆ 3.23 ಕೋಟಿ ರೂ. ನೀಡಲಾಗಿದೆ ಎಂದರು.

ಆಯೋಗದಿಂದ ಸರ್ಕಾರಕ್ಕೆ 100 ರೂ. ಬೇಡಿಕೆ ಇಟ್ಟರೆ ಸರ್ಕಾರ 30 ರೂ. ನೀಡುತ್ತದೆ. ಇದರಿಂದ ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಿದರೆ ನೆರವಾಗಬಹುದು ಎಂದರು.

ಇದಕ್ಕೆ ಆಕ್ಷೇಪಿಸಿದ ಪೌರಕಾರ್ಮಿಕರ ಮುಖಂಡರು, 2017-18ರಲ್ಲಿ ಆಯ್ಕೆ ಮಾಡಿದ್ದ ಫಲಾನುಭವಿಗಳ ಆಯ್ಕೆ ಮಾಡಿದ್ದರೂ ಅದರಲ್ಲಿ ತಪ್ಪು ಹುಡುಕಿ ಕಡತ ಬಾಕಿ ಇರಿಸಿದ್ದೀರಿ. ಯಾರೋ ಕೆಲವರು ಮಾಡಿರುವ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಯಾಕೆ ಕೊಡುತ್ತಿದ್ದೀರಿ. ಕೂಡಲೇ ಕಡತ ವಿಲೇವಾರಿ ಮಾಡಿ ನೈಜ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ ಎಂದರು.

ನಗರಸಭೆ ಸದಸ್ಯ ಅಂಬರೀಷ್ ಮಾತನಾಡಿ, ಗ್ರಾಮೀಣ ಸಫಾಯಿ ಕರ್ಮಚಾರಿಗಳ ಸಮಸ್ಯೆ ಆಲಿಸುತ್ತಿಲ್ಲ. ಕಷ್ಟ ಹೇಳಿಕೊಂಡು ಸಫಾಯಿ ಕರ್ಮಚಾರಿ ಆಯೋಗದ ಕಚೇರಿಗೆೆ ಬಂದಾಗ ಅಧ್ಯಕ್ಷರು ಗೌರವಯುತವಾಗಿ ನಡೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ದಲಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರಾಧಾನ್ಯತೆ ನೀಡಬೇಕು. ಅಧಿಕಾರಿಗಳು, ಪೌರಕಾರ್ಮಿಕರ ನಡುವಿನ ವ್ಯವಹಾರಿಕ ವ್ಯತ್ಯಾಸಗಳಿಂದ ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು, ಸರಿಪಡಿಸಬೇಕು ಎಂದರು.

ಸಫಾಯಿ ಕರ್ಮಚಾರಿಗಳ ಮೇಲುಸ್ತುವಾರಿ ಸಮಿತಿ ಸದಸ್ಯ ವೆಂಕಟಾಲಚಪತಿ ಮಾತನಾಡಿ, ಪೌರಾಕರ್ಮಿಕರಿಗೆ ಗುಣಮಟ್ಟದ ಉಪಾಹಾರ ಸಿಗುತ್ತಿಲ್ಲ, ಅವಲಂಬಿತರಿಗೆ ಪುನರ್ವಸತಿ ಯೋಜನೆ ಜಾರಿಯಾಗುತ್ತಿಲ್ಲ, ನೀಡುತ್ತಿರುವ ಸುರಕ್ಷತಾ ಪರಿಕರ ಕಳಪೆ ಎಂದರು.

ಕೆಜಿಎಫ್ ನಗರಸಭೆಯಲ್ಲಿ ನೇರ ಪಾವತಿಯಡಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ 6 ತಿಂಗಳಿನಿಂದ ವೇತನ ನೀಡಿಲ್ಲ, ಸುರಕ್ಷತಾ ಪರಿಕರಗಳನ್ನು ನೀಡಿಲ್ಲ ಎಂದು ದೂರಿದರೆ, ಕೋಲಾರ ನಗರಸಭೆಯಲ್ಲಿ ನೇರ ನೇಮಕಾತಿಯಡಿ 15ರಿಂದ 20 ವರ್ಷ ಕೆಲಸ ನಿರ್ವಹಿಸುತ್ತಿದ್ದ 3 ಕಾರ್ಮಿಕರು ಮೃತರಾಗಿದ್ದಾರೆ, ಅವರ ಕುಟುಂಬಕ್ಕೆ ನಯಾಪೈಸೆ ನೀಡಿಲ್ಲ, ಪೌರಕಾರ್ಮಿಕರ ಕಾಯಂ ಸಂಬಂಧ ಗರಿಷ್ಠ ವರ್ಷ 45 ವರ್ಷ ನಿಗದಿಪಡಿಸಿದ್ದಾರೆ. ಆದರೆ ಇದರಿಂದ ಅನೇಕರಿಗೆ ಅನ್ಯಾಯವಾಗುತ್ತಿದ್ದು, ಹಿರಿತನದ ಆಧಾರದಲ್ಲಿ ಕಾಯಂ ಮಾಡಬೇಕೆಂದು ಪೌರ ಕಾರ್ಮಿಕ ಪಾಂಡು ಆಗ್ರಹಿಸಿದರು.

ಜಿಪಂ ಸಿಇಒ ಎನ್.ಎಂ.ನಾಗರಾಜ್, ಎಸ್ಪಿಗಳಾದ ಡೆಕ್ಕಾ ಕಿಶೋರ್‌ಬಾಬು, ಇಲಕ್ಕಿಯಾ ಕರುಣಾಕರಣ್, ಎಸಿ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಎಲ್ಲ 6 ತಾಲೂಕುಗಳಿಗೆ ಭೇಟಿ ನೀಡಿ, ಪೌರಕಾರ್ಮಿಕರಿಗೆ ನೀಡುತ್ತಿರುವ ಸೌಕರ್ಯಗಳ ಮಾಹಿತಿ ಪಡೆದು ವಾರದೊಳಗೆ ವರದಿ ಸಲ್ಲಿಸಬೇಕು. 15 ದಿನದೊಳಗೆ ಜಿಲ್ಲೆಯ ನಗರಸಭೆ, ಪುರಸಭೆಗಳಲ್ಲಿ ಆರೋಗ್ಯ ಶಿಬಿರ ನಡೆಸಬೇಕು. ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ