ನ್ಯೂಸ್

ಅಕ್ಕಮಹಾದೇವಿ ಮಹಿಳಾ ವಿವಿ ಘಟಿಕೋತ್ಸವ, ನಟಿ ತಾರಾ ಸೇರಿ ಮೂವರು ಸಾಧಕಿಯರು ಗೌರವ ಡಾಕ್ಟರೇಟ್‌ಗೆ ಭಾಜನ

ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿವಿ ಖ್ಯಾತಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ 16ನೇ ಘಟಿಕೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮೂವರು ಮಹಿಳಾ ಸಾಧಕಿಯರಿಗೆ ಗೌರವ ಡಾಕ್ಟರೇಟ್ ಹಾಗೂ 63 ವಿದ್ಯಾರ್ಥಿನಿಯರಿಗೆ 80 ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ. ಇನ್ನುಳಿದಂತೆ ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುತ್ತಿದ್ದು ರಾಜ್ಯಪಾಲ ಥಾವರಚಂದ ಗೆಹಲೋತ್ ಆಗಮಿಸುತ್ತಿರುವುದಾಗಿ ಕುಲಪತಿ ತುಳಸಿಮಾಲ ತಿಳಿಸಿದರು.

ತೊರವಿಯ ಜ್ಞಾನಶಕ್ತಿ ಆವರಣದಲ್ಲಿ ಜ.9ರಂದು ಮಧ್ಯಾಹ್ನ 12.30ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಖ್ಯಾತ ಲೇಖಕಿ, ಹೋರಾಟಗಾರ್ತಿ, ಚಿಂತಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿರುವ ಕಲಬುರಗಿಯ ಡಾ.ಮೀನಾಕ್ಷಿ ಬಾಳಿ, ಕನ್ನಡ ಚಲನಚಿತ್ರ ರಂಗದಲ್ಲಿ ಸಕ್ರಿಯವಾಗಿರುವ ನಟಿ ತಾರಾ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಉತ್ಸವ್ ರಾಕ್ ಗಾರ್ಡನ್ ಅನ್ನು ಸಂರಕ್ಷಿಸುವ ಮತ್ತು ಅಭಿವೃದ್ದಿಪಡಿಸುವ ಜವಾಬ್ದಾರಿಯನ್ನು ಅವರು ಹೊತ್ತಿರುವ ವೇದರಾಣಿ ದಾಸನೂರ ಇವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿ ಪ್ರೊ.ಶಶಿಕಲಾ ವಂಜಾರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಮತ್ತು ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ್ ಉಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಹಾಗೂ ಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಪದವಿ ಪ್ರದಾನ ವಿವರ

ವಿಶ್ವ ವಿದ್ಯಾಲಯದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ ಒಟ್ಟು 63 ವಿದ್ಯಾರ್ಥಿನಿಯರಿಗೆ 80 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. ಒಟ್ಟು 13,461 ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಒಟ್ಟು 34 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಒಟ್ಟು 1,106 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು. ಈ ಪೈಕಿ ಎಂಎ- 365, ಎಂಕಾಂ- 296, ಎಂಬಿಎ- 49, ಎಂಎಸ್‌ಸಿ- 304, ಎಂ.ಈಡಿ- 9, ಎಂಪಿಈಡಿ- 9, ಎಂಎಸ್‌ಡಬ್ಲ್ಯೂ- 20, ಎಂಸಿಎ- 40 ಮತ್ತು ಎಂಎಫ್‌ಎಂ- 14 ವಿದ್ಯಾರ್ಥಿನಿಯರು ಪದವಿಗೆ ಅರ್ಹರಾಗಿದ್ದಾರೆ. ಒಟ್ಟು 12,350 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವದು. ಇದರಲ್ಲಿ ಬಿಎ- 5387, ಬಿಎಸ್‌ಡಬ್ಲ್ಯೂ - 36, ಬಿಈಡಿ -1663, ಬಿಪಿಈಡಿ - 15, ಬಿಕಾಂ -3536, ಬಿಬಿಎ -122, ಬಿಎಸ್‌ಸಿ- 1413, ಬಿಸಿಎ-115, ಬಿಎಫ್‌ಟಿ- 63 ಮತ್ತು ಬಿಎಫ್‌ಎಡಿ- 5 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತುಳಸಿಮಾಲ ವಿವರಿಸಿದರು.

ಸಮಿತಿಗಳ ರಚನೆ-ಸಿದ್ಧತೆ ಪೂರ್ಣ

ಘಟಿಕೋತ್ಸವ ಅಚ್ಚುಕಟ್ಟಾಗಿ ನೆರವೇರಿಸಲು ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಘಟಿಕೋತ್ಸವ ಸಂದರ್ಭದಲ್ಲಿ ಮೊಬೈಲ್ ಫೋನ್, ವಿಡಿಯೋ ಕ್ಯಾಮೆರಾ, ಸ್ಟಿಲ್ ಕ್ಯಾಮೆರಾಗಳನ್ನು ನಿಷೇಧಿಸಲಾಗಿದೆ. ಆಹ್ವಾನಿತರು ಬೆಳಗ್ಗೆ 11.15ರೊಳಗಾಗಿ ತಮ್ಮ ಆಸನಗಳಲ್ಲಿ ಕುಳಿತಿರಬೇಕು ಮತ್ತು ಆಹ್ವಾನಿತರು ಘಟಿಕೋತ್ಸವದ ಮಧ್ಯದಲ್ಲಿ ಸಭಾಭವನದಿಂದ ಹೊರಕ್ಕೆ ಹೋಗಬಾರದೆಂದು ನಿರ್ದೇಶನ ನೀಡಲಾಗುತ್ತಿದೆ. ಅಲ್ಲದೇ. ಘಟಿಕೋತ್ಸವ ಮೆರವಣಿಗೆ ಸಭಾಂಗಣದಲ್ಲಿ ಪ್ರವೇಶಿಸುವಾಗಿನಿಂದ ಹಿಡಿದು ಕುಲಾಧಿಪತಿಗಳು ಪೀಠಸ್ಥರಾಗುವವರೆಗೂ ಸಭಾಸದರು ಎದ್ದು ನಿಂತಿರಬೇಕು. ಹಾಗೆಯೇ ಘಟಿಕೋತ್ಸವ ಮುಗಿದ ಬಳಿಕ, ಮೆರವಣಿಗೆ ಸಭಾಂಗಣವನ್ನು ಬಿಟ್ಟು ತೆರಳುವವರೆಗೆ, ಸಭಾಸದರು ತಮ್ಮ ಸ್ಥಳಗಳಲ್ಲಿಯೇ ಎದ್ದು ನಿಂತಿರಬೇಕು. ಘಟಿಕೋತ್ಸವದ ಸಭಾಂಗಣದಲ್ಲಿ 12 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶವಿಲ್ಲ. ಸಭಾಂಗಣದಲ್ಲಿ ಕ್ಯಾಮೆರಾ, ಮೊಬೈಲ್, ವಾಟರ್ ಬಾಟಲ್, ಕೊಡೆ, ಕೈಚೀಲ ಮುಂತಾದ ಯಾವುದೇ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತುಳಸಿಮಾಲ ತಿಳಿಸಿದರು.

ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ್, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ, ಮಾಧ್ಯಮ ಸಮಿತಿ ಅಧ್ಯಕ್ಷ ಪ್ರೊ.ಓಂಕಾರ ಕಾಕಡೆ ಹಾಗೂ ಸಂಯೋಜಕಿ ಡಾ.ತಹಮೀನಾ ಕೋಲಾರ, ಐಸಿಟಿ ಸಂಯೋಜಕ ಸಂದೀಪ್ ನಾಯಕ್ ಮತ್ತಿತರರಿದ್ದರು.