ನ್ಯೂಸ್

ಸ್ತ್ರೀಕುಲದ ಘನತೆ ಎತ್ತಿಹಿಡಿದ ಅಕ್ಕಮಹಾದೇವಿ

ಹೊಳೆಆಲೂರ: ಕನ್ನಡ ಸಾಹಿತ್ಯ ಪರಂಪರೆಯಲ್ಲಿ 12ನೇ ಶತಮಾನ ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ಮುನ್ನುಡಿ ಬರೆಯುವುದರ ಜತೆಗೆ ಮಹಿಳೆ ಸಮಾಜದ ಅವಿಭಾಜ್ಯ ಅಂಗ ಎಂಬ ತತ್ವವನ್ನು ನಾಡಿಗೆ ನೀಡಿದ ಮಹತ್ವದ ಘಟ್ಟ ಎಂದು ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾ ಹಿರೇಮಠಪಾಟೀಲ ಹೇಳಿದರು.

ಗ್ರಾಮದ ಅಕ್ಕನ ಬಳಗ ಸಭಾ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವ ಹಾಗೂ ತೊಟ್ಟಿಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶರಣೆ ಅಕ್ಕಮಹಾದೇವಿ ಲೌಕಿಕ ಪ್ರಪಂಚದ ವ್ಯಾಮೋಹ ತೊರೆದು, ವೈರಾಗ್ಯನಿಧಿಯಾಗಿ ಅಧ್ಯಾತ್ಮದತ್ತ ಒಲವು ತೋರಿ, ಬಸವಾದಿ ಶರಣರ ವಿಶ್ವಾರ್ಹತೆಗೆ ಪಾತ್ರಳಾಗಿ, ಅನುಭವ ಮಂಟಪದಲ್ಲಿ ತೋರಿದ ದಿಟ್ಟತನದ ಸಾತ್ವಿಕ ನಡೆ, ನುಡಿ, ವ್ಯಕ್ತಿತ್ವ ಮೆಚ್ಚುವಂತದು. ಮುಂದೆ ಶರಣ ಚಳವಳಿಯಲ್ಲಿ ಪ್ರಮುಖರಾಗಿ ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿಯಾಗಿ ತೋರಿದ ನಿಲುವು ಪ್ರಭಾವ ಬೀರುವಂತದು. ಕನ್ನಡದ ಪ್ರಥಮ ವಚನಗಾರ್ತಿಯಾಗಿ ಸಾಮಾಜಿಕ, ಧಾರ್ಮಿಕ ವ್ಯವಸ್ಥೆಯ ಬದಲಾವಣೆಯಲ್ಲಿ ನಿಜವಾದ ಪ್ರತಿಪಾದಕಿಯಾಗಿ ಸ್ತ್ರೀಕುಲದ ಘನತೆ, ಗೌರವ ಹೆಚ್ಚಿಸುವಲ್ಲಿ ತೋರಿದ ಪಾತ್ರ ಸ್ಮರಣೀಯವಾದದ್ದು. ಇದರಿಂದ ಅವಳು ನಡೆದ ದಾರಿ, ತೋರಿದ ನಿಲುವು, ನಡೆ ನುಡಿ ಚನ್ನಮಲ್ಲಿಕಾರ್ಜುನನಲ್ಲಿ ತೋರಿದ ಶ್ರದ್ಧೆ, ಭಕ್ತಿಯ ಪರಾಕಾಷ್ಠತೆ, ಸ್ತ್ರೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಪ್ರಭಾವತಿ ಪಾಟೀಲ, ಉಮಾ ಕಲ್ಲನಗೌಡ್ರ, ಶಾಂತಾ ಐವಳ್ಳಿ, ಶಾಂತಾ ಸುಳ್ಳದ, ರೇಣುಕಾ ಮಣ್ಣೂರ, ಭಾರತಿ ಗಾಣಿಗೇರ, ಲತಾ ಪಾಟೀಲ, ಶಕುಂತಲಾ ಕಲ್ಯಾಣಿ, ಲತಾ ಹಿರೇಮಠಪಾಟೀಲ, ಶರಣಮ್ಮ ಯಾದವಾಡ, ಇತರರಿದ್ದರು.