Lucknow: ಉತ್ತರ ಪ್ರದೇಶ ಸರ್ಕಾರ ನಕಲಿ ಕೆಮ್ಮಿನ ಸಿರಪ್ (Fake Cough Syrup) ಪೂರೈಸುತ್ತಿದೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದರು.
ಖಾಸಗಿ ಸಂಸ್ಥೆ ನೀಡಿರುವ ವರದಿಯನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯಾದವ್, ಆರೋಗ್ಯ ಇಲಾಖೆ ಈ ವಿಷಯದಲ್ಲಿ ಮೌನ ಕಾಯ್ದುಕೊಂಡಿದ್ದು, ಆಸ್ಪತ್ರೆ, ಜೈಲುಗಳು ಮತ್ತು ಮನೆಗಳಿಗೆ ನಕಲಿ ಸಿರಪ್ ತಲುಪುತ್ತಿದೆ ಎಂದು ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆಯ ಮೌನವನ್ನೂ ಪ್ರಶ್ನಿಸಿರುವ ಎಸ್‌ಪಿ ಮುಖ್ಯಸ್ಥ, ಇದರಿಂದ ಯಾರಿಗೆ ಲಾಭ ಎಂದಿದ್ದಾರೆ. ರಾಜಕೀಯ ಸಂಪರ್ಕ ಹೊಂದಿರುವ ವ್ಯಕ್ತಿಗಳು ಅಕ್ರಮ ವ್ಯಾಪಾರದ ಹಿಂದಿರುವವರನ್ನು ರಕ್ಷಿಸುತ್ತಿರಬಹುದು ಎಂದರು. ನಕಲಿ ಸಿರಪ್ ಘಟನೆಯನ್ನು "ವಿಷಕಾರಿ ಹಗರಣ" ಎಂದು ಕರೆದ ಯಾದವ್, ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಮತ್ತು ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಿಜೆಪಿಯ ಭ್ರಷ್ಟಾಚಾರ ಈಗ ಜೀವಗಳಿಗಗೂ ಅಪಾಯವನ್ನುಂಟುಮಾಡುತ್ತಿದೆ, ಈ ರೀತಿಯ ಸಿರಪ್ ಹಂಚಿಕೆ ಮಾನವೀಯತೆಯ ವಿರುದ್ಧದ ಅಪರಾಧ ಎಂದು ಕರೆದರು.
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಕಲುಷಿತ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆಗಳು ತಪಾಸಣೆಗಳನ್ನು ತೀವ್ರಗೊಳಿಸಿವೆ. ಲಕ್ನೋ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ದಾಳಿ ನಡೆಸಿ, ನಕಲಿ ಬ್ರಾಂಡ್‌ಗಳ ಅಡಿಯಲ್ಲಿ ಲೇಬಲ್ ಮಾಡಲಾದ ದೊಡ್ಡ ಪ್ರಮಾಣದ ನಕಲಿ ಸಿರಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಸಿದ ವಸ್ತುಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕವೆಂದು ಕಂಡುಬಂದಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಇದನ್ನೂ ಓದಿ:Russian oil ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ; ಈ ರೀತಿಯ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ ಎಂದ ಪುಟಿನ್
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂತಹ ಪ್ರಕರಣಗಳ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸರ್ಕಾರದ ಪ್ರತಿಕ್ರಿಯೆ ಮೇಲ್ನೋಟಕ್ಕೆ ಮಾತ್ರ ಸೀಮಿತವಾಗಿದ್ದು, ಪ್ರಮುಖ ಅಪರಾಧಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ತನಿಖೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆ ಕಾಯ್ದುಕೊಳ್ಳಬೇಕೆಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.(ಏಜೆನ್ಸೀಸ್)