ನ್ಯೂಸ್

ಗಜಪಡೆ ಮೂರು ಹಂತದ ಕುಶಾಲುತೋಪಿನ ತಾಲೀಮು

ಅವಿನಾಶ್ ಜೈನಹಳ್ಳಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವ ಗಜಪಡೆ ಮೂರು ಹಂತದ ಕುಶಾಲುತೋಪಿನ ತಾಲೀಮಿಗೆ ಅಣಿಯಾಗಿದೆ.

ಈಗಾಗಲೇ ಮರದ ಅಂಬಾರಿ ಹೊರುವ ತಾಲೀಮನ್ನು ಯಶಸ್ವಿಯಾಗಿ ನಿರ್ವಹಿಸಿರುವ ಗಜಪಡೆಗೆಕುಶಾಲುತೋಪಿನ ತಾಲೀಮನ್ನು ಸೆ.26 ರಿಂದ ಆರಂಭಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಪ್ರತಿ ಬಾರಿಯಂತೆ ಗಜಪಡೆಯ ಮುಂದೆ ಮೂರು ಹಂತದಲ್ಲಿ ಕುಶಾಲುತೋಪಿನ ತಾಲೀಮು ನಡೆಸಲಾಗುತ್ತದೆ. ಮೊದಲ ಹಂತದಲ್ಲಿ 26 ರಂದು ಬೆಳಗ್ಗೆ 10.30ಕ್ಕೆ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯಲಿದೆ. ಬಳಿಕೆ ಎರಡು ಮತ್ತು ಮೂರನೇ ಹಂತದಲ್ಲಿ ಸೆ.29 ಮತ್ತು ಅ.1 ರಂದು ಕೂಡ ಬೆಳಗ್ಗೆ 10.30ಕ್ಕೆ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯಲಿದೆ.
7 ಫಿರಂಗಿಗಳಿಂದ ತಲಾ 3 ಸುತ್ತಿನಂತೆ ಒಟ್ಟು 21 ಸುತ್ತು ಕುಶಾಲುತೋಪು ಸಿಡಿಸಲಾಗುತ್ತದೆ. ಮೊದಲ ಹಂತದಲ್ಲಿ ಬೆದರದೆ ಇರಲಿ ಎಂಬ ಕಾರಣಕ್ಕೆ ಕೆಲ ಆನೆಗಳ ಕಾಲುಗಳನ್ನು ಸರಪಳಿಯಿಂದ ಕಟ್ಟಲಾಗುತ್ತದೆ. ಗಜಪಡೆ, ಅಶ್ವಾರೋಹಿ ಪಡೆಯ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ. ವಿಜಯದಶಮಿಯಂದು ಅರಮನೆ ಬಳಿ ಪೊಲೀಸರು 21 ಬಾರಿ ಕುಶಾಲತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸುತ್ತಾರೆ. ಆ ಸದ್ದಿಗೆ ಆನೆಗಳು, ಕುದುರೆಗಳು ಬೆದರದೆ, ವಿಚಲಿತಗೊಳ್ಳದೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆರಂಭಕ್ಕೂ ಮುನ್ನ ಫಿರಂಗಿಗಳ ಮೂಲಕ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ. ಕುಶಾಲತೋಪು ಸಿಡಿಸುವ ತಾಲೀಮು ಆನೆಗಳಿಗೆ ದೊಡ್ಡ ಪ್ರಮಾಣದ ಶಬ್ದವನ್ನು ಪರಿಚಯಿಸುವ ಕೆಲಸವಾಗಿದೆ.
ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಭೀಮ, ಗೋಪಿ, ಧನಂಜಯ, ಕಂಜನ್, ರೋಹಿತ, ಲಕ್ಷ್ಮೀ, ವರಲಕ್ಷ್ಮೀ ಮತ್ತು ಏಕಲವ್ಯ, ಪ್ರಶಾಂತ, ಮಹೇಂದ್ರ, ಸುಗ್ರೀವ್, ಲಕ್ಷ್ಮೀ, ಹಿರಣ್ಯ ಆನೆಗಳು ತಾಲೀಮಿನಲ್ಲಿ ಭಾಗಿಯಾಗಲಿವೆ.