ಮುಂಬೈ: ವೃತ್ತಿಜೀವನದಲ್ಲಿ ಅನೇಕ ಯಶಸ್ವಿ ಸಿನಿಮಾಗಳನ್ನು ನೀಡುವ ಮೂಲಕ ಅದ್ಭುತ ನಟನೆಗೆ ಹೆಸರುವಾಸಿಯಾಗಿರುವ ನಟಿ ಐಶ್ವರ್ಯಾ ರೈ ಬಚ್ಚನ್ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ತನ್ನದೇ ಅಭಿಮಾನಿ ಬಳಗ ಹೊಂದಿರುವ ನಟಿ. ಐಶ್ವರ್ಯಾ ಒಬ್ಬಂಟಿಯಾಗಿ ಕಾಣಸಿಗುವುದು ಅಪರೂಪ. ಮಗಳು ಆರಾಧ್ಯ ಇಲ್ಲದೆ ಐಶ್ವರ್ಯಾ ಎಲ್ಲಿಗೂ ಹೋಗುವುದಿಲ್ಲ. ಐಶ್ವರ್ಯಾ ಸಾರ್ವಜನಿಕವಾಗಿ ಕಾಣಿಸಿಕೊಂಡಗಾಲೆಲ್ಲ ಜತೆಯಲ್ಲಿ ಆರಾಧ್ಯ ಬಚ್ಚನ್ ಇದ್ದೇ ಇರುತ್ತಾರೆ.
ಮುಂಬೈನಲ್ಲಿ ಗಣಪತಿ ದರ್ಶನಕ್ಕಾಗಿ ಬಂದಾಗಲೂ ಐಶ್ವರ್ಯಾ ಮತ್ತು ಆರಾಧ್ಯ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೇನ್ಸ್ ಚಲನಚಿತ್ರೋತ್ಸವ 2024ರಲ್ಲೂ ಐಶ್ವರ್ಯಾ ಮತ್ತು ಆರಾಧ್ಯ ಕಾಣಿಸಿಕೊಂಡಿದ್ದರು. ಅಷ್ಟೆ ಯಾಕೆ ಅನಂತ್ ಅಂಬಾನಿ ಮದುವೆಗೂ ಈ ಇಬ್ಬರು ಪ್ರತ್ಯೇಕವಾಗಿ ಹೋಗಿದ್ದರು. ಬಚ್ಚನ್ ಫ್ಯಾಮಿಲಿ ಫೋಟೋದಲ್ಲಿ ಈ ಇಬ್ಬರು ಮಿಸ್ ಆಗಿದ್ದೂ ಗೊತ್ತೆ ಇದೆ. ಆ ಸಮಯದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ವಿಚ್ಛೇದನದ ಸುದ್ದಿ ಹರಿದಾಡುತಿತ್ತು. ಐಶ್ವರ್ಯಾ ಅದನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಈ ಬಗ್ಗೆ ಅಭಿಷೇಕ್ ಬಚ್ಚನ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸದ್ಯ ಈ ಅಮ್ಮ-ಮಗಳ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಐಶ್ವರ್ಯಾ ಮತ್ತು ಆರಾಧ್ಯ ದುಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಏರ್ಪೋರ್ಟ್ನಲ್ಲಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಗಿದೆ. SIIMA (ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್) 2024ರಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ. ಐಶ್ವರ್ಯಾ ತಮ್ಮ ಸೌಂದರ್ಯದಿಂದ ಎಲ್ಲರ ಮನಸೂರೆ ಮಾಡುವುದು ಸುಳ್ಳಲ್ಲ. ನೆಟ್ಟಿಗರು ಐಶ್ವರ್ಯಾ ಅವರ ಲುಕ್ಗೆ ಫಿದಾ ಆಗಿ ಪ್ರತಿಕ್ರಿಯೆ ನೀಡುತ್ತಿದ್ದರೆ, ಮಗಳು ಆರಾಧ್ಯ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆರಾಧ್ಯ ಬಗ್ಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆರಾಧ್ಯ ಶಾಲೆಗೆ ಹೋಗುವುದಿಲ್ಲವೆ. ಆರಾಧ್ಯ ಶಾಲೆಗೆ ಗೈರಾಗುತ್ತಿಲ್ಲವೆ. ಶಾಲೆ ಇರುತ್ತದೆ ಆದರೆ ಯಾವಾಗಲೂ ಈಕೆ ರಜೆ ಪಡೆಯುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)