ನ್ಯೂಸ್

ವಿಚ್ಛೇದನ ವದಂತಿ ನಡುವೆಯೇ ದುಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಐಶ್ವರ್ಯ-ಅಭಿಷೇಕ್​!

ಮುಂಬೈ: ಕಳೆದ ಕೆಲವು ತಿಂಗಳಿಂದ ಬಾಲಿವುಡ್​ ಚೆಲುವೆ,​ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಯೊಂದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆಯೂ ಇದರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿತ್ತು. ಆದ್ರೆ, ಈಗ ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಅಭಿಷೇಕ್ ಮತ್ತು ಐಶ್ವರ್ಯ ಇಬ್ಬರೂ ಡಿವೋರ್ಸ್​ ಕುರಿತು ಶೀಘ್ರವೇ ಮೌನ ಮುರಿಯಲಿದ್ದಾರೆ ಎಂದೆಲ್ಲಾ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ವದಂತಿಗಳಿಗೆ ಸ್ಟಾರ್​ ದಂಪತಿ ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಕೆಲವು ಹದ್ದಿನ ಕಣ್ಣಿನ ಅಭಿಮಾನಿಗಳು ಇಬ್ಬರ ನಡುವೆ ನಿಖರವಾಗಿ ಏನು ತಪ್ಪಾಗಿದೆ? ಇವರಿಬ್ಬರು ಏಕೆ ವಿಚ್ಛೇದನ ಮೊರೆ ಹೋಗಲು ಬಯಸುತ್ತಾರೆ ಎಂಬುದರ ಕುರಿತು ಸುಳಿವುಗಳನ್ನು ಹುಡುಕುತ್ತಿದ್ದಾರೆ. ಅಸಲಿಗೆ ಡಿವೋರ್ಸ್​ ವಿಚಾರ ತೀವ್ರ ಚರ್ಚೆಯಾಗಲು ಕಾರಣ ಅಭಿಷೇಕ್ ಬಚ್ಚನ್! ಹೌದು, ಕೆಲವು ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಭಾರೀ ಚರ್ಚೆಯಾಗುತ್ತಿದ್ದ 'ಗ್ರೇ ಡಿವೋರ್ಸ್'​ ಪೋಸ್ಟ್​ಗೆ ನಟ ಲೈಕ್​ ಕೊಟ್ಟಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ನಟ ವಿಚ್ಛೇದನ ಕೊಡಲು ಬಯಸಿದ್ದಾರೆ ಎಂಬಂತೆ ತೋರುತ್ತಿದೆ ಎಂದು ಊಹಿಸಿ, ಈ ವದಂತಿಗೆ ಪುಷ್ಟಿ ನೀಡಿದರು. ಇದು ಮತ್ತಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತು.

ಇದೆಲ್ಲದರ ನಡುವೆಯೇ ಇದೀಗ ದುಬೈ ವಿಮಾನ ನಿಲ್ದಾಣದಲ್ಲಿ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ಚರ್ಯ ಬಚ್ಚನ್ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮಿಬ್ಬರ ಮಧ್ಯೆ ಯಾವುದೇ ತೊಂದರೆ ಇಲ್ಲ ಎಂಬಂತೆ ಇಬ್ಬರು ಏರ್​ಪೋರ್ಟ್​ನಿಂದ ಹೊರಬಂದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ತಮ್ಮ ಮಗಳು ಆರಾಧ್ಯ ಜತೆ ದಂಪತಿ ದುಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಬಗ್ಗೆ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).