ನ್ಯೂಸ್

ಇನ್ಮುಂದೆ ಬ್ಲಿಂಕಿಟ್​ನಿಂದ 10 ನಿಮಿಷದಲ್ಲಿ ಸಿಗಲಿವೆ 'ಏರ್​ಟೆಲ್​' ಸಿಮ್​ಕಾರ್ಡ್​ಗಳು; Airtel

ಸಾಮಾನ್ಯವಾಗಿ ಈ ರೀತಿಯ ಯೋಜನೆಯನ್ನು ಜಾರಿಗೆ ತರುವುದು ಸ್ವಲ್ಪ ಕಷ್ಟಕರ. ಆದರೆ ಈ ಬ್ಲಿಂಕಿಟ್‌ ಇದೀಗ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಇದಕ್ಕೆ ಸಾಟಿ ಎಂಬಂತೆ, ಏರ್‌ಟೆಲ್ ಕೂಡ ಒಂದು ಹೆಜ್ಜೆಯನ್ನ ಮುಂದಿಟ್ಟಿದೆ.

Airtel | ಇಷ್ಟು ದಿನ ಬ್ಲಿಂಕಿಂಟ್‌ ಆಪ್​ನಲ್ಲಿ ದಿನಸಿ ವಸ್ತುಗಳು, ಎಲೆಕ್ಟ್ರಾನಿಕ್ ಡಿವೈಸ್‌ಗಳು, ಬಟ್ಟೆ ಇತ್ಯಾದಿ ವಸ್ತುಗಳು ಮನೆ ಬಾಗಿಲಿಗೆ ಬಂದು ತಲುಪುತ್ತಾ ಇದ್ದವು. ಆದರೆ ಇನ್ಮುಂದೆ ಏರ್​ಟೆಲ್‌ ಸಿಮ್‌ ಕೂಡ ನಿಮ್ಮ ಮನೆಗೆ ಬಂದು ಸೇರಲಿವೆ.

ಟೆಲಿಕಾಂ ಕ್ಷೇತ್ರದಲ್ಲಿ ಏರ್‌ಟೆಲ್ ಮತ್ತೊಮ್ಮೆ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ಒದಗಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನಿಟ್ಟಿದೆ. ವಿತರಣೆಯ ಶ್ರೇಣಿಯಲ್ಲಿ ಹೆಸರು ಮಾಡಿರುವ ಬ್ಲಿಂಕಿಟ್ ಜೊತೆ ಕೈಜೋಡಿಸಿ, ಈಗ ಏರ್‌ಟೆಲ್ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್​ಅನ್ನು ಮನೆ ಬಾಗಿಲಿಗೆ ತಲುಪಿಸುವ ಹೊಸ ಸೇವೆ ಆರಂಭಿಸಿದೆ. ಈ ಸೇವೆಯು ಸದ್ಯದ ಮಟ್ಟಿಗೆ ದೇಶದ ಪ್ರಮುಖ 16 ನಗರಗಳಲ್ಲಿ ಲಭ್ಯವಿದ್ದು, ಭವಿಷ್ಯದಲ್ಲಿ ಇನ್ನಷ್ಟು ನಗರಗಳಿಗೆ ಈ ಸೇವೆ ವಿಸ್ತರಣೆಯಾಗಲಿದೆ.

49ರೂ.ಗೆ ವಿತರಣಾ ಸೇವೆ:

ಈ ಸೇವೆಯ ಮುಖ್ಯ ಉದ್ದೇಶವೆಂದರೆ ಗ್ರಾಹಕರಿಗೆ ಅತಿಹೆಚ್ಚು ಹೊರೆಯಾಗದಂತೆ ಸಿಮ್ ಕಾರ್ಡ್ ಖರೀದಿಸಲು ಸಹಾಯ ಮಾಡುವುದಾಗಿದೆ. ಈಗ ಬ್ಲಿಂಕಿಟ್‌ನಲ್ಲಿ ಗ್ರಾಹಕರು, ಕೇವಲ 49 ರೂ.ಪಾವತಿಸಿ ಸಿಮ್​ಕಾರ್ಡ್​ ಪಡೆಯಬಹುದಾಗಿದೆ. ಈ ಮೂಲಕ ಯಾವುದೇ ಅಡ್ಡಿ ಅಡೆತಡೆಯಿಲ್ಲದೆ ಹೊಸ ಸಿಮ್ ಕಾರ್ಡ್‌ನ್ನು ತಮ್ಮ ಮನೆಗೆ ತರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅಥವಾ ನೇರವಾಗಿ ಗ್ರಾಹಕಸೇವೆ ಸಂಖ್ಯೆ 9810012345 ಮೂಲಕ ಸಂಪರ್ಕ ಮಾಡಬಹುದಾಗಿದೆ. ಸೇವೆ ಆರಂಭದ ದಿನದಿಂದಲೇ ಇದು ಗ್ರಾಹಕರಿಂದ ಉತ್ತಮ ಪ್ರತಿಸ್ಪಂದನ ಪಡೆಯುತ್ತಿದೆ.

ಎಲ್ಲೆಲ್ಲಿ ಸಿಗಲಿದೆ ಈ ಸೌಲಭ್ಯ:

ಬೆಂಗಳೂರು, ಮುಂಬೈ, ಪುಣೆ, ಲಕ್ನೋ, ಜೈಪುರ, ದೆಹಲಿ, ಗುರ್ಗಾಂವ್, ಫರಿದಾಬಾದ್, ಸೋನೆಪತ್, ಅಹಮದಾಬಾದ್, ಸೂರತ್, ಚೆನ್ನೈ, ಭೋಪಾಲ್, ಇಂದೋರ್, ಕೋಲ್ಕತ್ತಾ ಮತ್ತು ಹೈದರಾಬಾದ್ ನಗರಗಳಲ್ಲಿ ಸದ್ಯಕ್ಕೆ ಈ ಸೇವೆ ಲಭ್ಯವಿದೆ.

ಸಿಮ್ ಕಾರ್ಡ್​ ಸಕ್ರಿಯಗೊಳಿಸುವುದೇಗೆ?

ಸಿಮ್ ಕಾರ್ಡ್‌ ತಲುಪಿದ ಬಳಿಕ, ಗ್ರಾಹಕರು ತಮ್ಮ ಆಧಾರ್ ಆಧಾರಿತ KYC ಪ್ರಕ್ರಿಯೆ ಮೂಲಕ ಸರಳವಾಗಿ ಸಿಮ್ ಅನ್ನು ಸಕ್ರಿಯಗೊಳಿಸಬಹುದು. ಇದನ್ನು ಗ್ರಾಹಕರು ತಮ್ಮ ನೆರವಿನೊಂದಿಗೆ ಆನ್‌ಲೈನ್‌ ಮಾರ್ಗದರ್ಶನದಿಂದ ಸಹ ಮುಗಿಸಿಕೊಳ್ಳಬಹುದು. ಸಿಮ್ ಸಕ್ರಿಯಗೊಳಿಸುವಿಕೆಗೆ 15 ದಿನಗಳ ಗಡುವು ನೀಡಲಾಗಿದೆ.

(ಏಜೆನ್ಸೀಸ್)