ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ನಿವೇಶನ ನೀಡುವ ಸಂಬಂಧ ಉಂಟಾಗಿದ್ದ ಸಮಸ್ಯೆಗೆ ಪರಿಹಾರ ಸೂತ್ರ ಸಿದ್ಧವಾಗಿದೆ. ಜಿಲ್ಲಾಡಳಿತದ ವಿರುದ್ಧ ಕೋರ್ಟ್‌ನಲ್ಲಿ ದಾಖಲಿಸಿದ್ದ ದಾವೆ ಹಿಂಪಡೆಯುವುದಾಗಿ ರೈತರು ಭರವಸೆ ನೀಡಿದ್ದಾರೆ. ಅದೇ ವೇಳೆ ಸೆ.10ರೊಳಗೆ ರೈತರಿಗೆ ನಿವೇಶನ ನೀಡುವುದಾಗಿ ಶಾಸಕ ಕೆ.ಬಿ.ಅಶೋಕ ನಾಯ್ಕ ವಾಗ್ದಾನ ಮಾಡಿದ್ದಾರೆ.
ಶನಿವಾರ ಅಶೋಕ ನಾಯ್ಕ ಅವರು ತಮ್ಮ ಕಾರ್ಯಾಲಯದಲ್ಲಿ ರೈತರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸೋಗಾನೆ ಸಮೀಪದ ಶಿವಣ್ಣ ಕ್ಯಾಂಪನ್‌ಲ್ಲಿ ಗೃಹ ನಿರ್ಮಾಣ ಮಂಡಳಿಯಿಂದ ಬಡಾವಣೆ ನಿರ್ಮಾಣ ಮಾಡಲಾಗಿದೆ. ಇಲ್ಲಿನ ನಿವೇಶನಗಳನ್ನು ಖಾಸಗಿಯವರಿಗೆ ನೀಡುವ ಜತೆಗೆ ವಿಮಾನ ನಿಲ್ದಾಣಕ್ಕೆ ಜಾಗ ನೀಡಿದ ರೈತರಿಗೂ 30*40 ವಿಸ್ತೀರ್ಣದ ನಿವೇಶನ ನೀಡಲಾಗುವುದು ಎಂದು ಶಾಸಕ ಕೆ.ಬಿ.ಅಶೋಕ ನಾಯ್ಕ ಸಭೆಗೆ ತಿಳಿಸಿದರು.
ಇನ್ನು 15 ದಿನಗಳೊಳಗೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಲಾಟರಿ ಮೂಲಕ ನಿವೇಶನ ಹಂಚಿಕೆ ನಡೆಯಲಿದೆ. ಅದರೊಂದಿಗೆ ನಾವು ಈ ಹಿಂದೆ ನೀಡಿದ್ದ ನಿವೇಶನ ವಿತರಣೆಯ ಭರವಸೆ ಈಡೇರಿಸಲು ಬದ್ಧರಿದ್ದೇವೆ. ನಿವೇಶನ ಹಂಚಿಕೆ ಸಂಬಂಧ ಈಗಾಗಲೇ ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಮಾಲೋಚನೆ ನಡೆಸಿದ್ದಾರೆ.
ಕಾನೂನು ತೊಡಕು
ಶಿವಣ್ಣನ ಕ್ಯಾಂಪ್‌ನಲ್ಲಿ ನಿವೇಶನ ಹಂಚಿಕೆ ಮಾಡುವ ಸಂಬಂಧ ಸಚಿವ ವಿ.ಸೋಮಣ್ಣ ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಆದೇಶವೂ ಹೊರಬಿದ್ದಿದೆ. ಈಗ ನಿವೇಶನ ಹಂಚಿಕೆಗೆ ಕಾನೂನು ತೊಡಕು ಎದುರಾಗಿದೆ. ಕೋರ್ಟ್ ಮೆಟ್ಟಿಲೇರಿರುವ ರೈತರು ದಾವೆ ಹಿಂಪಡೆಯದೇ ಇದ್ದರೆ ನಿವೇಶನ ಹಂಚಿಕೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಕೆ.ಬಿ.ಅಶೋಕ ನಾಯ್ಕ ರೈತರಿಗೆ ವಿವರಿಸಿದರು.
ಸೋಗಾನೆಯಲ್ಲಿ ನಿವೇಶನ ನೀಡಲು ಆರಂಭದಲ್ಲಿ ತೀರ್ಮಾನಿಸಲಾಗಿತ್ತು. ಅದಕ್ಕಾಗಿ ಪ್ರಕ್ರಿಯೆಗಳೂ ಎದುರಾಗಿದ್ದವು. ಆದರೆ ಕ್ರಮೇಣ ಏರ್‌ಪೋರ್ಟ್ ಕಾಮಗಾರಿ ಸ್ಥಗಿತಗೊಳ್ಳುತ್ತಿದ್ದಂತೆಯೇ ನಿವೇಶನ ಹಂಚಿಕೆ ಪ್ರಕ್ರಿಯೆಯೂ ನೆನಗುದಿಗೆ ಬಿದ್ದಿತ್ತು. ಬಳಿಕ ಆಯುಷ್ ವಿವಿಗೆ ಗುರುತು ಮಾಡಿದ್ದ 100 ಎಕರೆ ಭೂಮಿಯಲ್ಲಿ 38 ಎಕರೆಯನ್ನು ನಿವೇಶನ ಹಂಚಿಕೆಗೆ ಬಳಸಲು ಜಿಲ್ಲಾಡಳಿತ ಮುಂದಾಗಿತ್ತು.
ಆದರೆ ಜಿಲ್ಲಾಡಳಿತದ ಕ್ರಮಕ್ಕೆ ಅಲ್ಲಿನ ರೈತರು ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಮಾನ ನಿಲ್ದಾಣ ಸಮೀಪವೇ ನಿವೇಶನ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ಎಲ್ಲ ಪ್ರಕ್ರಿಯೆಗೂ ವಿಳಂಬವಾದವು ಎಂದು ಅಶೋಕ ನಾಯ್ಕ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಕಾರಿ ಎಸ್.ಬಿ.ದೊಡ್ಡ ಗೌಡರ್, ಸೋಗಾನೆ ಗ್ರಾಪಂ ಗ್ರಾಮ ಲೆಕ್ಕಾಧಿಕಾರಿ ಹರ್ಷವರ್ಧನ್, ರೈತ ಮುಖಂಡ ಕೃಷ್ಣಪ್ಪ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಭರವಸೆ ನೀಡಿದ್ದ ಬಿಎಸ್‌ವೈ
ಬಿ.ಎಸ್.ಯಡಿಯೂರಪ್ಪ ಡಿಸಿಎಂ ಆಗಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆಗ 650 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಮೊದಲ ಬಾರಿಗೆ ಬಗರ್‌ಹುಕುಂ ಸಾಗುವಳಿದಾರರಿಗೂ ಪರಿಹಾರ ನೀಡಲಾಗಿತ್ತು. ಭೂಮಿ ನೀಡಿದ ರೈತರಿಗೆ ಪರಿಹಾರದೊಂದಿಗೆ ನಿವೇಶನ ನೀಡುವುದಾಗಿ ಬಿಎಸ್‌ವೈ ಭರವಸೆ ನೀಡಿದ್ದರು.
ಕ್ರಮೇಣ ಬದಲಾದ ರಾಜಕೀಯ ಸನ್ನಿವೇಶ ಹಾಗೂ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಏರ್‌ಪೋರ್ಟ್ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಇತ್ತ ಜಮೀನು ನೀಡಿದ ರೈತರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಿರಲೇ ಇಲ್ಲ. 2019ರಲ್ಲಿ ಬಿಎಸ್‌ವೈ ಮತ್ತೆ ಸಿಎಂ ಆಗುತ್ತಿದ್ದಂತೆಯೇ ಏರ್‌ಪೋರ್ಟ್ ಕಾಮಗಾರಿಗೆ ವೇಗ ಸಿಕ್ಕಿತು.
ಆದರೆ ಜಮೀನು ನೀಡಿದ ರೈತರಿಗೆ ನಿವೇಶನ ನೀಡುವ ಭರವಸೆ ಈಡೇರಿರಲಿಲ್ಲ. ಬಿಎಸ್‌ವೈ ಏರ್‌ಪೋರ್ಟ್ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲೆಲ್ಲಾ ರೈತರು ನಿವೇಶನಕ್ಕಾಗಿ ಒತ್ತಾಯಿಸುತ್ತಿದ್ದರು. ಆಗ ನಿವೇಶನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡುತ್ತಿದ್ದರು. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ನಿವೇಶನ ಹಂಚಿಕೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇದೀಗ ದಾವೆ ಹಿಂಪಡೆಯಲು ರೈತರು ಒಪ್ಪಿರುವುದರಿಂದ ಸಮಸ್ಯೆ ಬಗೆಹರಿದಂತಾಗಿದೆ.