ನವದೆಹಲಿ: ಕೋವಿಡ್ 19 ನಿಯಂತ್ರಣಕ್ಕೆ ಘೋಷಿಸಲಾಗಿರುವ ಲಾಕ್ಡೌನ್ ಅವಧಿಯಲ್ಲಿ ಬುಕ್ಕಿಂಗ್ ಮಾಡಲಾಗಿದ್ದ ಎಲ್ಲ ಟಿಕೆಟ್ಗಳ ಹಣವನ್ನು ಹಿಂದಿರುಗಿಸಲು ರಾಷ್ಟ್ರದ ಎಲ್ಲ ವೈಮಾನಿಕ ಸಂಸ್ಥೆಗಳು ಸಮ್ಮತಿಸಿವೆ.
ಇನ್ನು ಮೂರು ವಾರಗಳಲ್ಲಿ ಯಾವುದೇ ರದ್ಧತಿಯ ಶುಲ್ಕ ಇಲ್ಲದೆ ಟಿಕೆಟ್ನ ಹಣವನ್ನು ಹಿಂದಿರುಗಿಸಲು ವೈಮಾನಿಕ ಸಂಸ್ಥೆಗಳು ಸಮ್ಮತಿಸಿರುವುದಾಗಿ ನಾಗರಿಕ ವಿಮಾನಯಾನದ ಡೈರೆಕ್ಟರೇಟ್ ಜನರಲ್ (ಡಿಜಿಸಿಎ) ಹೇಳಿದೆ.
ಕರೊನಾ ಮಾರಿಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಘೋಷಿಸಿದೆ. ಅದರಂತೆ ಈ ಅವಧಿಯಲ್ಲಿ ವಿಮಾನ, ರೈಲು ಮತ್ತು ಬಸ್ ಸೇರಿ ಎಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಯಾವುದೇ ರದ್ಧತಿ ಶುಲ್ಕವನ್ನು ಅನ್ವಯಿಸದೆ, ಲಾಕ್ಡೌನ್ ಅವಧಿಯಲ್ಲಿ ಕಾಯ್ದಿರಿಸಲಾಗಿದ್ದ ಟಿಕೆಟ್ಗಳ ಹಣವನ್ನು ಹಿಂದಿರುಗಿಸಿದೆ. ವಿಮಾನ ಸೇವೆಗಳು ಸ್ಥಗಿತಗೊಂಡಿರುವುದರಿಂದ, ವೈಮಾನಿಕ ಯಾನ ಸಂಸ್ಥೆಗಳು ಮುಂಗಡ ಕಾಯ್ದಿರಿಸಿದ್ದ ಟಿಕೆಟ್ಗಳ ಹಣವನ್ನು ಹಿಂದಿರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಅದರಂತೆ ಈಗ ಹಣವನ್ನು ಹಿಂದಿರುಗಿಸಲು ವೈಮಾನಿಕ ಸಂಸ್ಥೆಗಳು ಸಮ್ಮತಿಸಿವೆ.