ನ್ಯೂಸ್

ನೂರಾರು ಭಾರತೀಯರನ್ನು ಕರೊನಾದಿಂದ ಕಾಪಾಡಿದ ಏರ್​ ಇಂಡಿಯಾ ಸಿಬ್ಬಂದಿ ಸಮಯ ಪ್ರಜ್ಞೆ

ನವದೆಹಲಿ: ಮಾಸ್ಕೋದಲ್ಲಿ ನಿರಾಶ್ರಿತರಾಗಿರುವ ಭಾರತೀಯರನ್ನು ಕರೆತರಲು ದೆಹಲಿಯಿಂದ ಹೊರಟಿದ್ದ ಏರ್​ ಇಂಡಿಯಾದ ಏರಬಸ್​-320 ವಿಮಾನವನ್ನು ಮಾರ್ಗ ಮಧ್ಯವೇ ದೆಹಲಿಗೆ ವಾಪಸ್​ ಕರೆಯಿಸಿಕೊಳ್ಳಲಾಗಿದೆ.

ದೆಹಲಿಯಿಂದ ಯಾವುದೇ ಪ್ರಯಾಣಿಕರಿಲ್ಲದೇ, ಕೇವಲ ಸಿಬ್ಬಂದಿಯೊಂದಿಗೆ ಹೊರಟಿದ್ದ ಏರ್​ ಇಂಡಿಯಾ ವಾಪಸ್​ ಕರೆಯಿಸಿಕೊಳ್ಳುವ ವೇಳೆಗಾಗಲೇ ಉಜ್ಬೆಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಶನಿವಾರ ಮಧ್ಯಾಹ್ನ 12.30ರಲ್ಲಿ ದೆಹಲಿಗೆ ಮರಳಿದೆ.

ಇಷ್ಟಕ್ಕೂ ವಿಮಾನ ವಾಪಸ್​ ಕರೆಯಿಸಿಕೊಳ್ಳಲು ಕಾರಣವೇನೆಂದರೆ, ಪೈಲಟ್​ ಕೋವಿಡ್​19 ಕಾಯಿಲೆಗೀಡಾಗಿದ್ದ. ಆತನಿಗೆ ಕರೊನಾ ಸೋಂಕು ಅಂಟಿರುವುದು ಪರೀಕ್ಷೆಯಲ್ಲಿ ಖಚಿತವಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಏರ್​ ಇಂಡಿಯಾ ಅಧಿಕಾರಿಗಳು ಕೂಡಲೇ ವಿಮಾನವನ್ನು ದೆಹಲಿಯಲ್ಲಿ ಲ್ಯಾಂಡ್​ ಮಾಡುವಂತೆ ಸೂಚಿಸಿದ್ದಾರೆ.

ಪೈಲಟ್​ ಹಾರಾಟಕ್ಕೂ ತೆರಳುವ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಲೋಪ ಉಂಟಾಗಿತ್ತು. ಬಳಿಕ ತಪಾಸಣೆ ಮಾಡಿದಾಗ ಕರೊನಾ ಪಾಸಿಟಿವ್​ ಎಂದು ಫಲಿತಾಂಶ ಬಂದಿತ್ತು. ವಿಮಾನದ ಸಿಬ್ಬಂದಿಯನ್ನೆಲ್ಲ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಮಿಷನ್​ ವಂದೇ ಭಾರತ ಕಾರ್ಯಾಚರಣೆಯಡಿ ಮಾಸ್ಕೋದಲ್ಲಿರುವ ಭಾರತೀಯರನ್ನು ಕರೆತರಲು ಮತ್ತೊಂದು ವಿಮಾನ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಏರ್​ ಇಂಡಿಯಾ ಸಿಬ್ಬಮದಿ ತೋರಿದ ಸಮಯ ಪ್ರಜ್ಞೆ ನೂರಾರು ಭಾರತೀಯರನ್ನು ಕರೊನಾದಿಂದ ಕಾಪಾಡಿದೆ.