ನ್ಯೂಸ್

ಆ.8ರವರೆಗೆ ಇಸ್ರೇಲ್​​​​ನ​​​ ಈ ಸ್ಥಳಕ್ಕೆ ವಿಮಾನ ಹಾರಾಟ ರದ್ದು; ಏರ್​ಇಂಡಿಯಾ ಕೊಟ್ಟ ಕಾರಣ ಇದು

ನವದೆಹಲಿ: ಇಸ್ರೇಲ್ ಮತ್ತು ಹಮಾಸ್​​​​ ನಡುವಿನ ಯುದ್ಧದ ಭೀತಿಯ ಮಧ್ಯೆ ಏರ್​ ಇಂಡಿಯಾ ಟೆಲ್​ ಅವಿವ್​​ಗೆ ತೆರಳುವ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಈ ಹಿಂದೆ ಲೆಬನಾನ್​ನಲ್ಲಿರುವ ಭಾರತೀಯರಿಗೆ ತಕ್ಷಣವೇ ತೊರೆಯುವಂತೆ ಭಾರತ ಸರ್ಕಾರ ಸಲಹೆ ನೀಡಿತ್ತು. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಅವರ ಹತ್ಯೆಯ ನಂತರ ಇಸ್ರೇಲ್ ಮತ್ತು ಹಮಾಸ್​​​ ನಡುವಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ.

ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಟೆಲ್ ಅವಿವ್​​ಗೆ ತೆರಳುವ ಮತ್ತು ಅಲ್ಲಿಂದ ಬರುವ ನಮ್ಮ ನಿಗದಿತ ವಿಮಾನಗಳ ಕಾರ್ಯಾಚರಣೆಯನ್ನು 2024 ಆಗಸ್ಟ್ 8ರವರೆಗೆ ಸ್ಥಗಿತಗೊಳಿಸಿದ್ದೇವೆ. ತಕ್ಷಣದಿಂದಲೆ ಜಾರಿಗೆ ಬರುವಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಏರ್ ಇಂಡಿಯಾವು ಆಗಸ್ಟ್​​ 1ರಂದು ದೆಹಲಿಯಿಂದ ಟೆಲ್ ಅವಿವ್​​​​​​​​ಗಿದ್ದ ವಿಮಾನ AI139 ಮತ್ತು ಟೆಲ್ ಅವಿವ್‌ನಿಂದ ದೆಹಲಿಗಿದ್ದ AI140 ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ಈ ಎರಡು ವಿಮಾನಗಳಲ್ಲಿ ಪ್ರಯಾಣಿಸಲು ಬುಕಿಂಗ್ ಹೊಂದಿದ್ದ ಪ್ರಯಾಣಿಕರಿಗೆ ಮರುಹೊಂದಿಸಿವಿಕೆ ಮತ್ತು ರದ್ದತಿ ಶುಲ್ಕಗಳನ್ನು ಒಂದು ಬಾರಿ ಮನ್ನಾ ಮಾಡಲಾಗುವುದು. ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಏರ್​ಲೈನ್ಸ್​​ ತಿಳಿಸಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ 011-69329333 / 011-69329999ಗೆ ಕರೆ ಮಾಡುವಂತೆ ತಿಳಿಸಿದೆ. (ಏಜೆನ್ಸೀಸ್​​)