ನವದೆಹಲಿ: ವಿಮಾನ ಸಂಚಾರ ಯಾವಾಗ ಆರಂಭವಾಗುತ್ತೆ ಎಂದು ಕಾಯುತ್ತಿದ್ದವರಿಗೆ ಏರ್ ಇಂಡಿಯಾ ಸಿಹಿ ಸುದ್ದಿ ನೀಡಿದೆ. ದೇಶಿಯ ವಿಮಾನಗಳ ಸಂಚಾರವನ್ನು ಮೇ 4ರಂದು ಶುರು ಮಾಡುವುದಾಗಿ ಘೋಷಿಸಿದೆ.
ಶನಿವಾರದಿಂದಲೇ ಟಿಕೆಟ್ ಬುಕಿಂಗ್ಗೆ ಚಾಲನೆ ನೀಡಿದೆ. ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ವಿಮಾನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಜತೆಗೆ, ಮೇ 3ರವರೆಗೆ ಲಾಕ್ಡೌನ್ ವಿಸ್ತರಿಸಿರುವುದರಿಂದ ಏರ್ ಇಂಡಿಯಾ ಅಲ್ಲಿಯವರೆಗೆ ಟಿಕೆಟ್ ಬುಕಿಂಗ್ಅನ್ನು ಸ್ಥಗಿತಗೊಳಿಸಿತ್ತು. ಇದೀಗ ಮೇ 4ರಿಂದ ದೇಶೀಯ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಬಹುದು ಎಂದು ಸಂಸ್ಥೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಜೂ.1ರಿಂದ ಅಂತಾರಾಷ್ಟ್ರೀಯ ಪ್ರಯಾಣ: ಜೂನ್ 1ರಿಂದ ವಿದೇಶಗಳಿಗೆ ವಿಮಾನ ಸಂಚಾರ ಆರಂಭಿಸುವುದಾಗಿ ಏರ್ ಇಂಡಿಯಾ ತಿಳಿಸಿದೆ. ಇದೀಗ ಇತರ ಖಾಸಗಿ ವಿಮಾನ ಸಂಸ್ಥೆಗಳು ಕೂಡ ಇದೇ ಅವಧಿಯಲ್ಲಿ ವಿಮಾನ ಯಾನ ಆರಂಭಿಸಲಿದ್ದು, ಟಿಕೆಟ್ ಬುಕಿಂಗ್ ಆರಂಭಿಸಿವೆ.
ಕೆಲ ಸಂಸ್ಥೆಗಳು ಏಪ್ರಿಲ್ 14ರ ನಂತರದ ಪ್ರಯಾಣಕ್ಕಾಗಿ ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಮಾಡಿಸಿಕೊಂಡಿದ್ದವು. ಆದರೆ, ಲಾಕ್ಡೌನ್ ವಿಸ್ತರಣೆಯಾಗಿದ್ದರಿಂದ ಪ್ರಯಾಣಿಕರಿಗೆ ಟಿಕೆಟ್ ಹಣ ಮರಳಿಸುವ ಪ್ರಕ್ರಿಯೆ ಆರಂಭಿಸಿವೆ.
ನಾಗರಿಕ ವಿಮಾನ ಸಂಚಾರ ಸ್ಥಗಿತಗೊಂಡಿದ್ದರೂ ದೇಶದ ವಿವಿಧ ಭಾಗಗಳಿಗೆ ವೈದ್ಯಕೀಯ ಹಾಗೂ ಅಗತ್ಯ ವಸ್ತುಗಳ ಸಾಗಣೆ ಕಾರ್ಯದಲ್ಲಿ ಏರ್ ಇಂಡಿಯಾ ಸೇರಿ ಹಲವು ಸಂಸ್ಥೆಗಳು ಭಾಗಿಯಾಗಿದ್ದವು. ವಿದೇಶಗಳಿಂದಲೂ ಅಗತ್ಯ ಸಾಮಗ್ರಿಗಳನ್ನು ಭಾರತಕ್ಕೆ ತರುವಲ್ಲಿಯೂ ಏರ್ ಇಂಡಿಯಾ ನಿರತವಾಗಿತ್ತು.
d