ನವದೆಹಲಿ: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಗಳ ಪ್ರಯಾಣಕ್ಕೆ ಮೀಸಲಾದ ಎರಡನೇ ಏರ್ ಇಂಡಿಯಾ ಒನ್ ವಿಮಾನ ಶನಿವಾರ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಮೊದಲನೇ ವಿಮಾನ ಈ ತಿಂಗಳ ಆರಂಭದಲ್ಲೇ ದೆಹಲಿಗೆ ಆಗಮಿಸಿತ್ತು.
ಬೋಯಿಂಗ್ ಬಿ -747 ವಿಮಾನದ ಬದಲಿಗೆ ಇನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮುಂತಾದ ಗಣ್ಯರು ಬಿ-777 ವಿವಿಐಪಿ ಮಾದರಿಯ ವಿಮಾನವನ್ನು ಬಳಸಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ಅಗತ್ಯಗಳನ್ನು ಪೂರೈಸುವುದಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.
ಅತಿಗಣ್ಯರ ಓಡಾಟಕ್ಕಾಗಿ ಖರೀದಿಸಿರುವ ಎರಡು ಬಿ777 ವಿಮಾನದಲ್ಲಿ ಲಾರ್ಜ್ ಏರ್ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್ಮೆಷರ್ಸ್ (ಎಲ್ಎಐಆರ್ಸಿಎಂ) ಎಂಬ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಸ್ವಯಂರಕ್ಷಣ ಸೂಟ್ಗಳನ್ನೂ ಇದು ಒಳಗೊಂಡಿದೆ. ಎರಡು ವಿಮಾನಗಳಲ್ಲಿ ಅಳವಡಿಸಲಾಗುತ್ತಿರುವ ಎಲ್ಎಐಆರ್ಸಿಎಂ ವ್ಯವಸ್ಥೆಯನ್ನು 1,434.72 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೆರಿಕದಿಂದ ಖರೀದಿಸಲಾಗಿದೆ. (ಏಜೆನ್ಸೀಸ್)