ನ್ಯೂಸ್

ದೆಹಲಿಯಲ್ಲಿಳಿತು ಗಣ್ಯರ ವಿಮಾನ ಏರ್​ ಇಂಡಿಯಾ ಒನ್ ..

ನವದೆಹಲಿ: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಯವರ ಪ್ರಯಾಣಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಿದ B777 ವಿಮಾನ ಏರ್​ ಇಂಡಿಯಾ ಒನ್ ಅಮೆರಿಕದಿಂದ ಹೊರಟು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಲ್ಯಾಂಡ್ ಆಗಿದೆ. ಈ ವಿಮಾನ ಜುಲೈನಲ್ಲೇ ಭಾರತಕ್ಕೆ ಆಗಮಿಸಬೇಕಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಹಸ್ತಾಂತರ ಎರಡು ಬಾರಿ ಮುಂದೂಡಲ್ಪಟ್ಟಿತ್ತು.

ಗುರುವಾರ ಅಪರಾಹ್ನ 3 ಗಂಟೆಗೆ ಏರ್​ ಇಂಡಿಯಾ ಒನ್ ಲ್ಯಾಂಡ್ ಆಗಿದೆ. ಇನ್ನೊಂದು ವಿಮಾನ ಮುಂದಿನ ಕೆಲವೇ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರಗೊಳ್ಳಲಿದೆ. ಅಮೆರಿಕದ ಬೋಯಿಂಗ್ ನಿರ್ಮಿತ ವಿಮಾನಗಳಿವು. 2018ರಲ್ಲಿ ಏರ್​ಇಂಡಿಯಾ ಈ ಎರಡು ವಿಮಾನಗಳನ್ನು ಗಣ್ಯರ ಪ್ರಯಾಣಕ್ಕೆ ಮರುವಿನ್ಯಾಸಗೊಳಿಸುವುದಕ್ಕೆ ಅಮೆರಿಕದ ಬೋಯಿಂಗ್ ಕಂಪನಿಗೆ ರವಾನಿಸಿತ್ತು. ಈ ಮರುವಿನ್ಯಾಸಕ್ಕೆ 8.400 ಕೋಟಿ ರೂಪಾಯಿ ಅಂದಾಜಿಸಲಾಗಿತ್ತು.

ಗಣ್ಯರನ್ನು ಕರೆದೊಯ್ಯುವ B777 ವಿಮಾನಗಳು ಕ್ಷಿಪಣಿ ನಿರೋಧಕ ವ್ಯವಸ್ಥೆ - ಲಾರ್ಜ್​ ಏರ್​ಕ್ರಾಫ್ಟ್​ ಇನ್​ಫ್ರಾರೆಡ್​ ಕೌಂಟರ್​ಮೆಷರ್ಸ್ ಆ್ಯಂಡ್ ಸೆಲ್ಫ್ ಪ್ರೊಟೆಕ್ಷನ್ ಸ್ಯೂಟ್ಸ್ ಅನ್ನು ಹೊಂದಿರುತ್ತವೆ. ಫೆಬ್ರವರಿ ತಿಂಗಳಲ್ಲಿ ಅಂತಹ ಎರಡು ಸಿಸ್ಟಮ್ ಅನ್ನು ಭಾರತಕ್ಕೆ 190 ದಶಲಕ್ಷ ಡಾಲರ್​ಗೆ ಮಾರಾಟ ಮಾಡಲು ಅಮೆರಿಕ ಒಪ್ಪಿಗೆ ನೀಡಿತ್ತು. ಏರ್​ಇಂಡಿಯಾ ಒನ್ ವಿಮಾನಗಳನ್ನು ಭಾರತೀಯ ವಾಯುಪಡೆಯ ಪೈಲಟ್​ಗಳೇ ಮುನ್ನಡೆಸಲಿದ್ದಾರೆ.

ಪ್ರಸ್ತುತ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಯವರು ಏರ್​ ಇಂಡಿಯಾದ B747 ವಿಮಾನವನ್ನು ಪ್ರಯಾಣಕ್ಕೆ ಬಳಸುತ್ತಿದ್ದಾರೆ. ಈ ವಿಮಾನಗಳ ನಿರ್ವಹಣೆಯನ್ನು ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ನೋಡಿಕೊಳ್ಳುತ್ತಿದೆ. ಹೊಸ ವಿಮಾನ ಬಳಕೆ ಶುರುವಾದ ಬಳಿಕ B747 ವಿಮಾನಗಳು ವಾಣಿಜ್ಯ ಬಳಕೆ ಆಗಲಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)