| ಜಗದೀಶ ಬುರ್ಲಬಡ್ಡಿ
ಟಾಟಾ ಸಮೂಹ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಫೆ.14ರಂದು ಜಾಗತಿಕ ವಾಯುಯಾನ ಇತಿಹಾಸದಲ್ಲಿ ಅತಿದೊಡ್ಡ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು. 470 ವಿಮಾನಗಳನ್ನು ಖರೀದಿಸುವ ಈ ಒಪ್ಪಂದದ ಜತೆಗೆ ಹೆಚ್ಚುವರಿಯಾಗಿ 360 ವಿಮಾನಗಳನ್ನು ಖರೀದಿಸುವ ಆಯ್ಕೆಯೂ ಇದರಲ್ಲಿ ಸೇರಿದೆ. ಈ ವ್ಯವಹಾರ ಒಪ್ಪಂದದ ಒಟ್ಟು ಮೊತ್ತ ಅಂದಾಜು 80 ಬಿಲಿಯನ್ ಡಾಲರ್ (6,61,827 ಕೋಟಿ ರೂ.) ವಿಮಾನ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಅಮೆರಿಕದ ಬೋಯಿಂಗ್ ಮತ್ತು ಫ್ರಾನ್ಸ್ನ ಏರ್ಬಸ್ ಕಂಪನಿಗಳು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳು. ಇವೆರಡೂ ಕಂಪನಿಗಳೊಂದಿಗೆ ಖರೀದಿ ಒಪ್ಪಂದದ ನಿರ್ಧಾರವನ್ನು ಏರ್ ಇಂಡಿಯಾ ಕೈಗೊಂಡಿದೆ. ಈ ಮೂಲಕ ವಿಶ್ವ ದರ್ಜೆ ವಿಮಾನಯಾನ ಸಂಸ್ಥೆಯಾಗಿ ಬಾನಂಗಳದಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಮುಂದಾಗಿದೆ.
ಮೋದಿ-ಬೈಡೆನ್-ಮ್ಯಾಕ್ರಾನ್ ಮಾತುಕತೆ: ಈ ಒಪ್ಪಂದದಲ್ಲಿ ಭಾಗಿಯಾಗಿರುವ ಎಲ್ಲಾ ಮೂರು ಕಂಪನಿಗಳು ಖಾಸಗಿ ಸಂಸ್ಥೆಗಳಾಗಿದ್ದರೂ, ಒಪ್ಪಂದದ ಘೊಷಣೆಯ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಮಾತನಾಡಿರುವುದು ಈ ಒಪ್ಪಂದದ ಮಹತ್ವವನ್ನು ಸೂಚಿಸುತ್ತದೆ. ‘ಮುಂದಿನ ದಿನಗಳಲ್ಲಿ ಭಾರತವು ವಾಯುಯಾನ ಕ್ಷೇತ್ರದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ. ಮುಂದಿನ 15 ವರ್ಷಗಳಲ್ಲಿ ಭಾರತಕ್ಕೆ 2,000ಕ್ಕೂ ಹೆಚ್ಚು ವಿಮಾನಗಳು ಬೇಕಾಗುತ್ತವೆ’ ಎಂದೂ ಮೋದಿ ಹೇಳಿದರು. ವೈಮಾನಿಕ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ವ್ಯವಹಾರ ಹಿಂದೆ ಜರುಗಿಲ್ಲ. ಬೋಯಿಂಗ್ ಮತ್ತು ಏರ್ಬಸ್ ಕಂಪನಿಗಳಿಂದ 460 ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಅಮೆರಿಕ ಏರ್ಲೈನ್ಸ್ನ ಮೂಲ ಸಂಸ್ಥೆಯಾದ ಎಎಂಆರ್ ಕಾರ್ಪೆರೇಷನ್ 2011ರಲ್ಲಿ ಕೈಗೊಂಡಿದ್ದು ಇದುವರೆಗಿನ ಅತಿದೊಡ್ಡ ಖರೀದಿ ಒಪ್ಪಂದವಾಗಿತ್ತು. ಪ್ರಸ್ತುತ ಭಾರತೀಯ ಪ್ರಯಾಣಿಕರು ಸಾಗರೋತ್ತರ ಹಾರಾಟಕ್ಕಾಗಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳನ್ನು ಹೆಚ್ಚು ಅವಲಂಬಿಸಿದ್ದು, ಈಗ ಏರ್ ಇಂಡಿಯಾ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಇದಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ಇಂಡಿಗೊದೊಂದಿಗೂ ಸ್ಪರ್ಧೆಗೆ ಇಳಿಯಲಿದೆ.
ಕಂಪನಿಗಳ ವಿಲೀನ: ಕೇಂದ್ರ ಸರ್ಕಾರದ ಒಡೆತನದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಕಂಪನಿ 18 ಸಾವಿರ ಕೋಟಿ ರೂಪಾಯಿಗೆ (15,300 ಕೋಟಿ ರೂಪಾಯಿ ಸಾಲ ಬಾಕಿ ಸೇರಿ) 2022ರ ಜನವರಿ 7ರಂದು ಖರೀದಿಸಿತು.
ಉಡಾನ್: ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೊಳಿಸಿದ ಉಡೆ ದೇಶ ಕಾ ಆಮ್ ನಾಗರಿಕ್ (ಉಡಾನ್) ಯೋಜನೆಯು ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ದಿಕ್ಕನ್ನು ಬದಲಾಯಿಸಲು ಕಾರಣವಾಗಿದೆ. ಜನಸಾಮಾನ್ಯರೂ ವಿಮಾನಯಾನ ಕೈಗೊಳ್ಳಬೇಕೆಂಬ ಉದ್ದೇಶದ ಈ ಯೋಜನೆಯಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಕೆಲವು ಮಾರ್ಗಗಳಲ್ಲಿ ಕಡಿಮೆ ವೆಚ್ಚದಲ್ಲಿ ವಿಮಾನ ಸಂಚಾರ ಒದಗಿಸಲು ವಿಮಾನಯಾನ ಸಂಸ್ಥೆಗಳಿಗೆ ಸಹಾಯಧನ ನೀಡಲಾಗುತ್ತಿದೆ.
ದೇಶದ ನಾಗರಿಕ ವಿಮಾನಯಾನ ಕ್ಷೇತ್ರವು ಅಸಾಧಾರಣ ಬೆಳವಣಿಗೆಗೆ ಸಜ್ಜಾಗಿದೆ. 2027ರ ವೇಳೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿದಂತೆ ಭಾರತವು 40 ಕೋಟಿ ವಿಮಾನ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆಯಿದೆ. | ಜ್ಯೋತಿರಾದಿತ್ಯ ಸಿಂಧಿಯಾ ಕೇಂದ್ರ ನಾಗರಿಕ ವಿಮಾನಯಾನ ಸಚಿವ
ಅಮೆರಿಕದ 10 ಲಕ್ಷ ಜನರಿಗೆ ಉದ್ಯೋಗ: ಬೋಯಿಂಗ್ ಸಂಸ್ಥೆಯಿಂದ ವಿಮಾನ ಖರೀದಿಯಿಂದ ಅಮೆರಿಕದ 44 ರಾಜ್ಯಗಳಲ್ಲಿನ 10 ಲಕ್ಷ ಅಮೆರಿಕನ್ನರಿಗೆ ಉದ್ಯೋಗಗಳನ್ನು ಒದಗಿಸುತ್ತದೆ. ಅಲ್ಲದೆ, ಇದಕ್ಕಾಗಿ ಅನೇಕರಿಗೆ ನಾಲ್ಕು ವರ್ಷಗಳ ಕಾಲೇಜು ಪದವಿಯ ಅಗತ್ಯವಿರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ನಷ್ಟದಲ್ಲಿ ಭಾರತೀಯ ವಿಮಾನಯಾನ ಉದ್ಯಮ: ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ದೇಶದ ವಿಮಾನಯಾನ ಉದ್ಯಮವು 2019-20ರಲ್ಲಿ -ಠಿ; 4,770 ಕೋಟಿ; 2020-21ರಲ್ಲಿ -ಠಿ; 12,479 ಕೋಟಿ; ಮತ್ತು 2021-22ರಲ್ಲಿ 11,658 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಕೋವಿಡ್ ಸಾಂಕ್ರಾಮಿಕ, ರೂಪಾಯಿ ಬೆಲೆ ಕುಸಿತ, ಅಧಿಕ ಕಾರ್ಯನಿರ್ವಹಣೆ ವೆಚ್ಚ, ತೈಲ ಬೆಲೆ ಏರಿಕೆ, ಅಧಿಕ ತೆರಿಗೆ, ಪ್ರಸ್ತುತ ರಷ್ಯಾ- ಯೂಕ್ರೇನ್ ಯುದ್ಧ ಮುಂತಾದ ಸಂಗತಿಗಳು ನಷ್ಟಕ್ಕೆ ಕಾರಣ. ರಿಷಿ ಸುನಕ್ ಶ್ಲಾಘನೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್, ಈ ಒಪ್ಪಂದವು ಬ್ರಿಟನ್ನ ವೈಮಾನಿಕ ವಲಯಕ್ಕೆ ಆಕಾಶವೇ ಮಿತಿ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಬ್ರಿಟಿಷ್ ಹೈ ಕಮಿಷನ್ ಕೂಡ ಬ್ರಿಟನ್ಗೆ ಇದು ಶತಕೋಟಿ ಪೌಂಡ್ಗಳ ಮೌಲ್ಯದ್ದಾಗಿದೆ ಎಂದಿದೆ. ಫ್ರಾನ್ಸ್ನ ಏರ್ಬಸ್ ಕಂಪನಿ ತಯಾರಿಸುವ ವಿಮಾನಗಳಲ್ಲಿ ಬ್ರಿಟನ್ನ ರೋಲ್ಸ್ ರಾಯ್್ಸ ಕಂಪನಿಯ ಇಂಜಿನ್ಗಳನ್ನು ಬಳಸಲಾಗುತ್ತದೆ.