ನ್ಯೂಸ್

ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್​​ಇಂಡಿಯಾ ವಿಮಾನ ಮುಂಬೈಗೆ ವಾಪಸ್; ಕಾರಣ ಹೀಗಿದೆ | Air India Flight

ಮುಂಬೈ: ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI 119)(Air India Flight) ಸೋಮವಾರ(ಮಾರ್ಚ್​​ 10) ಹಾರಾಟದ ಅರ್ಧದಾರಿಯಲ್ಲೇ ಹಿಂತಿರುಗಬೇಕಾಯಿತು. ಸುರಕ್ಷತಾ ಅಪಾಯ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ನಂತರ ವಿಮಾನವನ್ನು ಮುಂಬೈನಲ್ಲಿ ಲ್ಯಾಂಡಿಂಗ್​ ಮಾಡಲಾಗಿದೆ.

ವಿಮಾನವು ಪ್ರಮಾಣಿತ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಿ ಬೆಳಗ್ಗೆ 10.25ಕ್ಕೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಈ ಘಟನೆಯ ನಂತರ ಪ್ರಯಾಣಿಕರು ಭಯ ಭೀತರಾಗಿದ್ದರು. ಆದರೆ ಅವರಿಗೆ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದ್ದು ವಿಮಾನವನ್ನು ಮಂಗಳವಾರಕ್ಕೆ ಮರು ನಿಗದಿಪಡಿಸಲಾಗಿದೆ.

ನ್ಯೂಯಾರ್ಕ್‌ಗೆ ಹೋಗುತ್ತಿದ್ದ ವಿಮಾನಕ್ಕೆ ಬೆದರಿಕೆ ಕರೆ ಬಂದಿತ್ತು. ನಂತರ ಅದನ್ನು ಮುಂಬೈನಲ್ಲಿ ಮತ್ತೆ ಇಳಿಸಲಾಯಿತು. ಭದ್ರತಾ ಸಂಸ್ಥೆಗಳು ವಿಮಾನದ ಕಡ್ಡಾಯ ತಪಾಸಣೆಯನ್ನು ಪ್ರಾರಂಭಿಸಿದವು. ಸಂಪೂರ್ಣ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಏರ್ ಇಂಡಿಯಾ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 11ರ ಮಂಗಳವಾರ ಬೆಳಗ್ಗೆ 5 ಗಂಟೆಗೆ ಹೊರಡುವಂತೆ ವಿಮಾನವನ್ನು ಮರು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಪ್ರಯಾಣಿಕರಿಗೆ ಹೋಟೆಲ್ ವಸತಿ, ಆಹಾರ ಮತ್ತು ಇತರ ಅಗತ್ಯ ಸಹಾಯವನ್ನು ಒದಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಮಾರ್ಚ್ 10ರಂದು ಮುಂಬೈ-ನ್ಯೂಯಾರ್ಕ್ (ಜೆಎಫ್‌ಕೆ) ವಿಮಾನದಲ್ಲಿ ಹಾರಾಟದ ಮಧ್ಯದಲ್ಲಿ ಸಂಭಾವ್ಯ ಭದ್ರತಾ ಬೆದರಿಕೆ ಪತ್ತೆಯಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಅಗತ್ಯ ಪ್ರೋಟೋಕಾಲ್​​​​​​ ಅನುಸರಿಸಿದ ನಂತರ ವಿಮಾನದಲ್ಲಿದ್ದ ಎಲ್ಲರ ಸುರಕ್ಷತೆಯ ಹಿತದೃಷ್ಟಿಯಿಂದ ವಿಮಾನವು ಮುಂಬೈಗೆ ಮರಳಿತು. ನಮ್ಮ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ನಮ್ಮ ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ.(ಏಜೆನ್ಸೀಸ್​​)