ನ್ಯೂಸ್

ಕೇರಳ ವಿಮಾನ ದುರಂತ: 17ಕ್ಕೇರಿದ ಸಾವಿನ ಸಂಖ್ಯೆ

ತಿರುವನಂತಪುರಂ​: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್​ ಇಂಡಿಯಾ ವಿಮಾನ ಕರೀಪುರದಲ್ಲಿರುವ ಕೋಳಿಕ್ಕೊಡ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್​ವೇನಲ್ಲಿ ಸ್ಕಿಡ್​ ಆಗಿದ್ದು, ಅಪ್ಪಳಿಸಿದ ರಭಸಕ್ಕೆ ಎರಡು ಭಾಗವಾಗಿದೆ. ಘಟನೆಯಲ್ಲಿ ಪೈಲಟ್ ಸೇರಿದಂತೆ ಸಾವಿನ ಸಂಖ್ಯೆ 17ಕ್ಕೇರಿದೆ. ಇದನ್ನು ಮಲಪ್ಪುರಂ ಜಿಲ್ಲಾಧಿಕಾರಿ ದೃಢ ಪಡಿಸಿದ್ದಾರೆ.

ಶುಕ್ರವಾರ ರಾತ್ರಿ 7.40ರ ಸುಮಾರಿಗೆ ಭಾರಿ ಮಳೆಯ ನಡುವೆಯೇ ದುರ್ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ವಿಮಾನದ ಸಂಖ್ಯೆ IX-1344 ಆಗಿದ್ದು, ಸಾರ್ವಜನಿಕವಾಗಿ ಲಭ್ಯವಾದ ಘಟನಾವಳಿಯ ಮೊದಲ ದೃಶ್ಯಗಳಲ್ಲಿ ವಿಮಾನವು ಎರಡು ತುಂಡುಗಳಾಗಿ ಒಡೆದಿದ್ದು, ಅದರ ಅವಶೇಷಗಳು ರನ್​ವೇ ಮತ್ತು ಅದರಾಚೆಗೆ ಹರಡಿಕೊಂಡಿವೆ.

ಘಟನಾ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ, ಪೊಲೀಸರು ಹಾಗೂ ಆಂಬುಲೆನ್ಸ್​ಗಳು ಬೀಡುಬಿಟ್ಟಿವೆ. ಇನ್ನು ವಿಮಾನಕ್ಕೆ ಬೆಂಕಿ ತಗುಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 11 ಮೃತದೇಹಗಳನ್ನು ಕೋಳಿಕ್ಕೊಡ್​ ಮೆಡಿಕಲ್​ ಕಾಲೇಜಿನಲ್ಲಿ ಇಡಲಾಗಿದೆ. 6 ಮೃತದೇಹಗಳು ಮಲಪ್ಪುರಂನ ಆಸ್ಪತ್ರೆಯಲ್ಲಿವೆ. ಗಾಯಗೊಂಡಿರುವ 35 ಮಂದಿಯನ್ನು ಕೊಂಡಾಟಿ ರಿಲೀಫ್ ಆಸ್ಪತ್ರೆಗೆ ರವಾನಿಸಲಾಗಿದೆ. ವಿಮಾನದಲ್ಲಿ 174 ಪ್ರಯಾಣಿಕರು, 10 ಶಿಶುಗಳು, ಇಬ್ಬರು ಪೈಲಟ್ಸ್​ ಮತ್ತು 5 ಕ್ಯಾಬಿನ್​ ಸಿಬ್ಬಂದಿ ಇದ್ದರು.

ಮೃತ ಪೈಲಟ್​ ಅನ್ನು ಕ್ಯಾಪ್ಟನ್​ ದೀಪಕ್​ ವಸಂತ್​ ಸಾಠೆ ಎಂದು ಗುರುತಿಸಲಾಗಿದೆ. ಅವಗಢದಲ್ಲಿ ಕೋ ಪೈಲಟ್ ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಮಾನ 7.38ಕ್ಕೆ ಲ್ಯಾಂಡಿಂಗ್ ಆಗಿತ್ತು. ಆದರೆ, ನಿಯಂತ್ರಣ ತಪ್ಪಿ 30 ಅಡಿ ಕೆಳಗೆ ಬಿದ್ದಿದೆ. ಇದರಿಂದಾಗಿ ವಿಮಾನ ಎರಡು ಭಾಗಗಳಾಗಿವೆ. ಪೈಲಟ್​ಗೆ ರನ್ ವೇ ಸ್ಪಷ್ಟವಾಗಿ ಕಾಣದೆ ಅಪಫಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆ ಬೆನ್ನಲ್ಲೇ ಕೇರಳ ಸಿಎಂ ಪಿಣರಾಯ್​ ವಿಜಯನ್​ ಟ್ವೀಟ್​ ಮಾಡಿದ್ದು, ಕರೀಪುರದಲ್ಲಿ ಕೋಳಿಕ್ಕೋಡ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿರುವ ವಿಮಾನ ಪತನ ಬಗ್ಗೆ ಅಗ್ನಿಶಾಮಕದಳ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ. ರಕ್ಷಣೆಗೆ ಹಾಗೂ ವೈದ್ಯಕೀಯ ನೆರವಿಗೆ ಬೇಕಾದ ಅಗತ್ಯ ಸೇವೆಗಳನ್ನು ಹೊಂದಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಗೃಹಸಚಿವ ಅಮಿತ್​ ಶಾ ಸಹ ಟ್ವೀಟ್​ ಮಾಡಿ, ಕೋಳಿಕ್ಕೊಡ್​ನಲ್ಲಿ ಏರ್​ ಇಂಡಿಯಾ ವಿಮಾನದ ದುರಂತದ ಬಗ್ಗೆ ಕೇಳಿ ದುಃಖವಾಯಿತು. ಸ್ಥಳಕ್ಕೆ ಬೇಗ ತಲುಪಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡಕ್ಕೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಕೇರಳಕ್ಕೆ ಈ ದಿನ ಕರಾಳ ಶುಕ್ರವಾರವಾಗಿದೆ. ಭಾರಿ ಮಳೆಯಿಂದ ಇಂದು ಹಲವೆಡೆ ಸಂಭವಿಸಿದ ಭೂಕುಸಿತದಿಂದಾಗಿ ಸುಮಾರು 15 ಮಂದಿ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ವಿಮಾನ ದುರಂತ ನಡೆದಿರುವುದು ಆತಂಕಕ್ಕೆ ದೂಡಿದೆ.