ನ್ಯೂಸ್

ವಿಮಾನ ಪತನ ತನಿಖೆ: ಇಂಧನ ಸ್ವಿಚ್​ಗಳಲ್ಲಿ ಯಾವುದೇ ದೋಷವಿಲ್ಲ ಎಂದ ಏರ್​ ಇಂಡಿಯಾ! Air India crash

Air India crash : ಏರ್​ ಇಂಡಿಯಾ ತನ್ನ ಬೋಯಿಂಗ್ 787 ವಿಮಾನಗಳ ಫ್ಲೀಟ್‌ನಲ್ಲಿ ಇಂಧನ ನಿಯಂತ್ರಣ ಸ್ವಿಚ್‌ಗಳ (ಎಫ್‌ಸಿಎಸ್) ಲಾಕಿಂಗ್ ಕಾರ್ಯವಿಧಾನದ ಮುಂಜಾಗ್ರತ ಪರಿಶೀಲನೆಗಳನ್ನು ಪೂರ್ಣಗೊಳಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿಸಿದೆ.

ಈ ವಾರದ ಆರಂಭದಲ್ಲಿ ವಿಮಾನಯಾನ ನಿಯಂತ್ರಕ ಡಿಜಿಸಿಎ, ಬೋಯಿಂಗ್ 787 ಮತ್ತು 737 ವಿಮಾನಗಳನ್ನು ನಿರ್ವಹಿಸುವ ಎಲ್ಲ ವಿಮಾನಯಾನ ಸಂಸ್ಥೆಗಳು ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಗಳನ್ನು ಪರೀಕ್ಷಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಏರ್​ ಇಂಡಿಯಾ ಈ ತಪಾಸಣೆ ನಡೆಸಿದೆ. ಟಾಟಾ ಒಡೆತನದ ಏರ್​ ಇಂಡಿಯಾ ವಿಮಾನಯಾನ ಅಧಿಕಾರಿಗಳು ಇಂಧನ ನಿಯಂತ್ರಣ ಸ್ವಿಚ್‌ಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏರ್​ ಇಂಡಿಯಾ ಅಧಿಕಾರಿಯ ಪ್ರಕಾರ, ವಿಮಾನಯಾನ ಸಂಸ್ಥೆಯ ಇಂಜಿನಿಯರಿಂಗ್ ತಂಡವು ವಾರಾಂತ್ಯದಲ್ಲಿ ತಪಾಸಣೆಗಳನ್ನು ನಡೆಸಿ, ಆಂತರಿಕ ಸಂದೇಶದ ಮೂಲಕ ಪೈಲಟ್‌ಗಳಿಗೆ ಫಲಿತಾಂಶವನ್ನು ತಿಳಿಸಿತು. ತಪಾಸಣೆಗಳು ಪೂರ್ಣಗೊಂಡಿವೆ ಮತ್ತು ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಬೋಯಿಂಗ್‌ನ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ಎಲ್ಲಾ ಬೋಯಿಂಗ್ 787-8 ವಿಮಾನಗಳು ಈಗಾಗಲೇ ಥ್ರೊಟಲ್ ಕಂಟ್ರೋಲ್ ಮಾಡ್ಯೂಲ್ (TCM) ಬದಲಿಗಳಿಗೆ ಒಳಗಾಗಿವೆ, ಅದರಲ್ಲಿ ಪ್ಲೈಟ್​ ಕಂಟ್ರೋನ್​ ಸಿಸ್ಟಮ್​ (FCS) ಒಂದು ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಜೂನ್​ 12ರಂದು ಅಹಮದಾಬಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರ್​ ಇಂಡಿಯಾ ವಿಮಾನ ಪತನಗೊಂಡು 242 ಪ್ರಯಾಣಿಕರು ಮೃತಪಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. ಈ ದುರಂತಕ್ಕೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ಅಪಘಾತದ ಬಗ್ಗೆ ಇತ್ತೀಚೆಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆಯಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) 15 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ಪ್ರಕಟಿಸಿದೆ. ಇದರ ಪ್ರಕಾರ ಇಂಜಿನ್​ಗೆ ಇಂಧನ ಪೂರೈಸುವ ಇಂಧನ ಸ್ವಿಚ್​ಗಳನ್ನು ರನ್​ನಿಂದ ಕಟ್ ಆಫ್​ಗೆ ಸರಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ವರದಿ ನೀಡಿದೆ.

ವರದಿಯಲ್ಲಿ ವಿಮಾನ ದುರಂತಕ್ಕೆ ಕಾರಣವಾದ ನಿರ್ಣಾಯಕ ತಾಂತ್ರಿಕ ಘಟನೆಗಳು ಮತ್ತು ಕಾಕ್‌ಪಿಟ್​ನಲ್ಲಿ ಪೈಲಟ್​​ಗಳಿಬ್ಬರ ಸಂಭಾಷಣೆ ವಿನಿಮಯಗಳನ್ನು ಕಾಲಾನುಕ್ರಮದಲ್ಲಿ ವಿವರಿಸಿದೆ. ಜೂನ್ 12ರಂದು ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ಬೋಯಿಂಗ್ 787 ವಿಮಾನದಲ್ಲಿದ್ದ ಪೈಲಟ್ "ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ?" ಎಂದು ಕೇಳುವುದನ್ನು ಹಾಗೂ ನಾನದನ್ನು ಮಾಡಿಲ್ಲ ಎಂದು ಎರಡನೇ ಪೈಲಟ್​ ಹೇಳಿರುವುದನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಸೆರೆಹಿಡಿದಿದೆ.

ವಿಮಾನ ಟೇಕಾಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಇಂಧನ ರನ್​ ಸ್ವಿಚ್​, ಕಟ್​ ಆಫ್​ ಆಗಿದ್ದು ಹೇಗೆ ಎಂಬುದು ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಇದರ ನಡುವೆ ಭಾರತದ ಪ್ರಮುಖ ವಾಯುಯಾನ ತಜ್ಞರಲ್ಲಿ ಒಬ್ಬರಾದ ಕ್ಯಾಪ್ಟನ್ ಮೋಹನ್ ರಂಗನಾಥನ್ ಅವರು ಎನ್​ಡಿಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದರು. ಇಂಧನ ಸ್ವಿಚ್ ಅನ್ನು ಆಟೋಮ್ಯಾಟಿಕ್​ ಆಗಿ ಆಯ್ಕೆ ಮಾಡಲು ಸಾಧ್ಯವಿಲ್ಲ ಅಥವಾ ವಿದ್ಯುತ್ ವೈಫಲ್ಯದಿಂದಾಗಿ ಆ ರೀತಿ ಆಗಲು ಸಾಧ್ಯವಿಲ್ಲ. ನಿರ್ದಿಷ್ಟ ಜಾಗದಲ್ಲೇ ಉಳಿಯುವಂತೆ ಸ್ವಿಚ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ವಿಚ್​ಗಳನ್ನು ಮೇಲಕ್ಕೆ ಅಥವಾ ಕೆಳಕ್ಕೆ ಸರಿಸಲು ಮೊದಲು ಅವುಗಳನ್ನು ಮೇಲಕ್ಕೆ ಎತ್ತಬೇಕು ಅಥವಾ ಹೊರತೆಗೆಯಬೇಕು. ಆದ್ದರಿಂದ, ಅವುಗಳನ್ನು ಅಜಾಗರೂಕತೆಯಿಂದಲೂ ಕಟ್ ಆಫ್ ಸ್ಥಾನಕ್ಕೆ ಸರಿಸುವ ಸಾಧ್ಯತೆ ಉದ್ಭವಿಸುವುದಿಲ್ಲ. ಅದನ್ನು 'ಕಟ್​ ಆಫ್' ಗೆ ಸರಿಸಲು ಇದು ಖಂಡಿತವಾಗಿಯೂ ಉದ್ದೇಶಪೂರ್ವಕ ಹಸ್ತಚಾಲಿತ ಆಯ್ಕೆಯ ಪ್ರಕರಣವಾಗಿದೆ ಎಂದು ರಂಗನಾಥನ್​ ಹೇಳಿದ್ದಾರೆ.

ತೀವ್ರ ವಿವಾದದ ಬೆನ್ನಲ್ಲೇ ಏರ್​ ಇಂಡಿಯಾ ತನ್ನ ಬೋಯಿಂಗ್ 787 ವಿಮಾನಗಳ ಫ್ಲೀಟ್‌ನಲ್ಲಿ ಇಂಧನ ನಿಯಂತ್ರಣ ಸ್ವಿಚ್‌ಗಳ (ಎಫ್‌ಸಿಎಸ್) ಲಾಕಿಂಗ್ ಕಾರ್ಯವಿಧಾನದ ಮುಂಜಾಗ್ರತ ಪರಿಶೀಲನೆಗಳನ್ನು ಪೂರ್ಣಗೊಳಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿಸಿದೆ. (ಏಜೆನ್ಸೀಸ್​)