ನ್ಯೂಸ್

ವಿಮಾನ ಪತನದ ಹಿಂದೆ ಇಂಧನ ಸ್ವಿಚ್​ಗಳ​ ಪಾತ್ರವೇನು? ಹೇಗೆ ಕಾರ್ಯನಿರ್ವಹಿಸುತ್ತವೆ? ಇಲ್ಲಿದೆ ಪೂರ್ಣ ಮಾಹಿತಿ... Air India crash

Air India crash : ಅಹಮದಾಬಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪತನಗೊಂಡು 242 ಪ್ರಯಾಣಿಕರ ಸಾವಿಗೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ಅಪಘಾತದ ಬಗ್ಗೆ ಇತ್ತೀಚೆಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆಯಾಗಿದೆ. ಇದರಲ್ಲಿ ವಿಮಾನದ ಇಂಧನವನ್ನು ನಿಯಂತ್ರಿಸುವ ಸ್ವಿಚ್‌ಗಳು ಇದೀಗ ಎಲ್ಲರ ಗಮನ ಸೆಳೆದಿದೆ.

ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) 15 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ ವಿಮಾನ ದುರಂತಕ್ಕೆ ಕಾರಣವಾದ ನಿರ್ಣಾಯಕ ತಾಂತ್ರಿಕ ಘಟನೆಗಳು ಮತ್ತು ಕಾಕ್‌ಪಿಟ್​ನಲ್ಲಿ ಪೈಲಟ್​​ಗಳಿಬ್ಬರ ಸಂಭಾಷಣೆ ವಿನಿಮಯಗಳನ್ನು ಕಾಲಾನುಕ್ರಮದಲ್ಲಿ ವಿವರಿಸಿದೆ. ಜೂನ್ 12ರಂದು ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ಬೋಯಿಂಗ್ 787 ವಿಮಾನದಲ್ಲಿದ್ದ ಪೈಲಟ್ "ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ?" ಎಂದು ಕೇಳುವುದನ್ನು ಹಾಗೂ ನಾನದನ್ನು ಮಾಡಿಲ್ಲ ಎಂದು ಎರಡನೇ ಪೈಲಟ್​ ಹೇಳಿರುವುದನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಸೆರೆಹಿಡಿದಿದೆ.

ವಿಮಾನ ಟೇಕಾಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಇಂಧನ ರನ್​ ಸ್ವಿಚ್​, ಕಟ್​ ಆಫ್​ ಆಗಿದ್ದು ಹೇಗೆ ಎಂಬುದು ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಇಂಧನ ಸ್ವಿಚ್‌ಗಳ ಮೇಲೆ ಎಲ್ಲರ ಗಮನವಿದೆ. ಆದ್ದರಿಂದ ಈ ಸ್ವಿಚ್​ ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಹಾರಾಟ ಕಾರ್ಯಾಚರಣೆಗಳಲ್ಲಿ ಅವುಗಳ ನಿರ್ಣಾಯಕ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಇಂಧನ ನಿಯಂತ್ರಣ ಸ್ವಿಚ್‌ಗಳು ಎಂದರೇನು?

ಇಂಧನ ನಿಯಂತ್ರಣ ಸ್ವಿಚ್‌ಗಳು ವಿಮಾನದ ಕಾಕ್​ಪಿಟ್​ನ ಅತ್ಯವಶ್ಯಕ ಘಟಕ. ಇದು ವಿಮಾನದ ಇಂಜಿನ್​ಗಳಿಗೆ ಇಂಧನ ಹರಿವನ್ನು ನಿಯಂತ್ರಿಸುತ್ತದೆ. ಪತನವಾದ ಬೋಯಿಂಗ್​ 787 ಡ್ರೀಮ್​ಲೈನರ್​ ವಿಮಾನ, ಎರಡು ಜಿಇ ಇಂಜಿಂನ್​ಗಳನ್ನು ಹೊಂದಿದ್ದು, ವಿಮಾನದ ಥರ್ಸ್ಟ್​ ಲೆವೆರ್ಸ್​ ಕೆಳಗಡೆ ಇಂಧನ ಕಂಟ್ರೋಲ್​ ಸ್ವಿಚ್​ಗಳನ್ನು ಇರಿಸಲಾಗಿರುತ್ತದೆ.

ಇಂಧನ ಸ್ವಿಚ್​ಗಳ ಬಹುಮುಖ್ಯ ಕಾರ್ಯಗಳೇನು?

* ನೆಲದ ಮೇಲೆ ಇಂಜಿನ್‌ಗಳನ್ನು ಪ್ರಾರಂಭಿಸುವುದು ಅಥವಾ ಸ್ಥಗಿತಗೊಳಿಸುವುದು

* ತುರ್ತು ಪರಿಸ್ಥಿತಿಯಲ್ಲಿ ಹಾರಾಟದ ಸಮಯದಲ್ಲಿ ಇಂಜಿನ್‌ಗಳನ್ನು ಹಸ್ತಚಾಲಿತವಾಗಿ ಸ್ಥಗಿತಗೊಳಿಸುವುದು ಅಥವಾ ಮರುಪ್ರಾರಂಭಿಸುವುದು

ಅಂದಹಾಗೆ ಈ ಸ್ವಿಚ್‌ಗಳನ್ನು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅವುಗಳು ನಿಗದಿತ ಸ್ಥಾನದಲ್ಲಿ ಉಳಿಯಲು ಸ್ಪ್ರಿಂಗ್-ಲೋಡ್ ಆಗಿರುತ್ತವೆ ಮತ್ತು ಅವುಗಳನ್ನು "RUN" (ಇಂಧನ ಹರಿಯುವಿಕೆ) ದಿಂದ "CUTOFF" (ಇಂಧನ ನಿಲ್ಲಿಸುವುದು) ಗೆ ಸರಿಸಲು, ಪೈಲಟ್, ಸ್ವಿಚ್ ಸ್ಥಾನವನ್ನು ಬದಲಾಯಿಸುವ ಮೊದಲು ಅದನ್ನು ಮೇಲಕ್ಕೆ ಎಳೆಯಬೇಕು. ಈ ರೀತಿ ಏಕೆ ಮಾಡಲಾಗಿದೆ ಎಂದರೆ ಆಟೋಮ್ಯಾಟಿಕ್​ ಆಗಿ ಸಕ್ರಿಯಗೊಳಿಸುವಿಕೆಯನ್ನು ತಡೆಗಟ್ಟಲು.

ಸಾಮಾನ್ಯ ಕಾರ್ಯಾಚರಣೆಗಳಲ್ಲಿ ಇಂಧನ ಸ್ವಿಚ್‌ಗಳ ಪಾತ್ರ

ದಿನನಿತ್ಯದ ಕಾರ್ಯಾಚರಣೆಗಳ ಸಮಯದಲ್ಲಿ, ಪೈಲಟ್‌ಗಳು ಮುಖ್ಯವಾಗಿ ಇಂಜಿನ್ ಸ್ಟಾರ್ಟ್-ಅಪ್ ಮತ್ತು ಸ್ಥಗಿತಗೊಳಿಸುವ ಕಾರ್ಯವಿಧಾನಗಳ ಸಮಯದಲ್ಲಿ ಇಂಧನ ಸ್ವಿಚ್‌ಗಳನ್ನು ಬಳಸುತ್ತಾರೆ. ಸ್ವಿಚ್​ ಅನ್ನು ಮೇಲಕ್ಕೆ ಎತ್ತಿ “RUN” ಸ್ಥಾನದ ಕಡೆಗೆ ಸರಿಸಿದರೆ, ಇಂಧನವು ಇಂಜಿನ್‌ಗಳಿಗೆ ಹರಿಯುತ್ತದೆ ಮತ್ತು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅದೇ ರೀತಿ ಸ್ವಿಚ್ ಅನ್ನು “CUTOFF” ಗೆ ಸರಿಸುವುದರಿಂದ ತಕ್ಷಣವೇ ಇಂಧನ ಪೂರೈಕೆ ನಿಲ್ಲುತ್ತದೆ ಮತ್ತು ಇಂಜಿನ್ ಸ್ಥಗಿತಗೊಳ್ಳುತ್ತದೆ. ಸುರಕ್ಷಿತ ನೆಲದ ಕಾರ್ಯಾಚರಣೆಗಳಿಗೆ ಮತ್ತು ಕೆಲವು ವಿಮಾನದಲ್ಲಿನ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಈ ಕಾರ್ಯವು ತುಂಬಾ ಅತ್ಯಗತ್ಯವಾಗಿದೆ.

ಏರ್ ಇಂಡಿಯಾ ವಿಮಾನದಲ್ಲಿ ಏನಾಯಿತು?

ಪ್ರಾಥಮಿಕ ಅಪಘಾತ ತನಿಖೆಯು ಒಂದು ನಿರ್ಣಾಯಕ ಮತ್ತು ಅಸಾಮಾನ್ಯ ಅನುಕ್ರಮವನ್ನು ಬಹಿರಂಗಪಡಿಸಿದೆ. ಅದೇನೆಂದರೆ, ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡುಗಳ ನಂತರ, ಎರಡೂ ಇಂಜಿನ್ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು “RUN” ನಿಂದ “CUTOFF” ಗೆ ಒಂದರ ನಂತರ ಒಂದರಂತೆ, ಕೇವಲ ಒಂದು ಸೆಕೆಂಡ್ ಅಂತರದಲ್ಲಿ ಸ್ಥಳಾಂತರಿಸಲಾಗಿದೆ. ಇದರಿಂದ ಎರಡೂ ಇಂಜಿನ್​ಗಳ ಇಂಧನ ಸ್ತಬ್ಧವಾಗಿದ್ದು, ವಿಮಾನ ಒತ್ತಡ ಕಳೆದುಕೊಂಡಿದೆ. ಇದೇ ಸಮಯದಲ್ಲಿ ಕಾಕ್‌ಪಿಟ್​ನಲ್ಲಿ ಮೊದಲನೇ ಪೈಲಟ್​ ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ? ಎಂದು ಕೇಳಿದ್ದಾರೆ. ಈ ವೇಳೆ "ನಾನು ಹಾಗೆ ಮಾಡಲಿಲ್ಲ" ಎಂದು ಎರಡನೇ ಪೈಲಟ್​ ಉತ್ತರಿಸಿದ್ದು, ಇದು ಕಾಕ್​ಪಿಟ್​ನ ಧ್ವನಿ ರೆಕಾರ್ಡಿಂಗ್​ನಲ್ಲಿ ದಾಖಲಾಗಿದೆ.

ಯಾವಾಗ ಇಂಧನ ಕಂಟ್ರೋಲ್​ ಸ್ವಿಚ್​ಗಳು ರನ್​ನಿಂದ ಕಟ್​ಆಫ್​ಗೆ ಸರಿಯಿತೋ ಕೆಲವು ಸೆಕೆಂಡುಗಳಲ್ಲಿ ಆ ಸ್ವಿಚ್‌ಗಳನ್ನು "RUN" ಗೆ ಹಿಂತಿರುಗಿಸಲಾಯಿತು. ಆದರೆ, ವಿಮಾನದ ಅಪಘಾತವನ್ನು ತಡೆಯಲು ಇಂಜಿನ್‌ಗಳು ಆ ಸಮಯದಲ್ಲಿ ಚೇತರಿಸಿಕೊಳ್ಳಲಿಲ್ಲ. ಹೀಗಾಗಿ ವಿಮಾನ ಪತನವಾಯಿತು. ಇನ್ನು ಈ ಸ್ವಿಚ್‌ಗಳ ವಿನ್ಯಾಸವನ್ನು ನೋಡಿದರೆ ಆಕಸ್ಮಿಕವಾಗಿ ಚಲಿಸುವ ಸಾಧ್ಯತೆ ಕಡಿಮೆ. ಸ್ವಿಚ್‌ಗಳು ಮತ್ತು ಅವು ನಿಯಂತ್ರಿಸುವ ಇಂಧನ ವಾಲ್ವ್​ಗಳು ಸ್ವತಂತ್ರ ವೈರಿಂಗ್ ಮೂಲಕ ಸಂಪರ್ಕಗೊಂಡಿವೆ ಮತ್ತು ಪ್ರತ್ಯೇಕ ವ್ಯವಸ್ಥೆಗಳಿಂದ ಚಾಲಿತವಾಗಿರುತ್ತವೆ. ಇದು ಅಜಾಗರೂಕತೆಯಿಂದ ಸಕ್ರಿಯಗೊಳಿಸುವ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಅಮೆರಿಕದ ವಾಯುಯಾನ ನಿಯಂತ್ರಕ, ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ), 2018 ರಲ್ಲಿ 737 ಜೆಟ್‌ಗಳಲ್ಲಿ ಸಂಭಾವ್ಯ ಇಂಧನ ನಿಯಂತ್ರಣ ಸ್ವಿಚ್ ಸಮಸ್ಯೆಗಳನ್ನು ಗುರುತಿಸಿತ್ತು. ಆದಾಗ್ಯೂ, ಇದು ಹಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೂಚಿಸಲಿಲ್ಲ. ಇನ್ನು ಏರ್ ಇಂಡಿಯಾ ಕೂಡ ಸ್ವಿಚ್​ ವಿಚಾರದಲ್ಲಿ ಯಾವುದೇ ತಪಾಸಣೆ ಸಹ ನಡೆಸಲಿಲ್ಲ. ಲಾಕಿಂಗ್ ವೈಶಿಷ್ಟ್ಯವನ್ನು ಒಳಗೊಂಡಂತೆ ಇಂಧನ ನಿಯಂತ್ರಣ ಸ್ವಿಚ್ ವಿನ್ಯಾಸವು ವಿವಿಧ ಬೋಯಿಂಗ್ ವಿಮಾನ ಮಾದರಿಗಳನ್ನು ಹೋಲುತ್ತದೆ. ಇದರಲ್ಲಿ ಭಾಗ ಸಂಖ್ಯೆ 4TL837-3D ಸೇರಿದೆ, ಇದನ್ನು B787-8 ವಿಮಾನ VT-ANB ನಲ್ಲಿ ಅಳವಡಿಸಲಾಗಿದೆ. ಏರ್ ಇಂಡಿಯಾದ ಮಾಹಿತಿಯ ಪ್ರಕಾರ, SAIB ಸಲಹೆಗಾರ ಮತ್ತು ಕಡ್ಡಾಯವಲ್ಲದ ಕಾರಣ ಸೂಚಿಸಲಾದ ತಪಾಸಣೆಗಳನ್ನು ನಡೆಸಲಾಗಿಲ್ಲ ಎಂದು ವರದಿ ತಿಳಿಸಿದೆ.

2023 ರಿಂದ VT-ANB ನಲ್ಲಿ ಇಂಧನ ನಿಯಂತ್ರಣ ಸ್ವಿಚ್‌ಗೆ ಸಂಬಂಧಿಸಿದಂತೆ ಯಾವುದೇ ದೋಷ ವರದಿಯಾಗಿಲ್ಲ ಎಂದು ವರದಿ ಹೇಳುತ್ತದೆ. ಬೋಯಿಂಗ್ 787 ಡ್ರೀಮ್‌ಲೈನರ್‌ನಂತಹ ಆಧುನಿಕ ಜೆಟ್‌ಲೈನರ್‌ಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್‌ಗಳ ನಿರ್ಣಾಯಕ ಪ್ರಾಮುಖ್ಯತೆಯನ್ನು ಏರ್ ಇಂಡಿಯಾ ಅಪಘಾತವು ತೋರಿಸುತ್ತದೆ. ಆಕಸ್ಮಿಕ ಬಳಕೆಯನ್ನು ತಡೆಗಟ್ಟಲು ಸ್ವಿಚ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದರೂ, “CUTOFF” ಸ್ಥಾನದಲ್ಲಿ ಸಕ್ರಿಯಗೊಳಿಸಿರುವುದು ಪರಿಣಾಮಗಳನ್ನು ಬೀರಿದೆ ಎಂದು ವರದಿಯು ಸುಳಿವು ನೀಡುತ್ತದೆ. (ಏಜೆನ್ಸೀಸ್​)