ನ್ಯೂಸ್

ಉದ್ಯೋಗ ಕೊರತೆಯಿಂದ ಮನನೊಂದು ಸಾವಿನ ಹಾದಿ ಹಿಡಿದ ಗಗನಸಖಿ

ಕೋಲ್ಕತ: ನಿಯಮಿತ ಕೆಲಸದ ಕೊರತೆಯಿಂದಾಗಿ ಖಿನ್ನತೆಗೆ ಜಾರಿದ ಗಗನಸಖಿಯೊಬ್ಬಳು ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲ್ಕತದಲ್ಲಿ ನಡೆದಿದೆ.

ಮೃತ ಗಗನಸಖಿಯನ್ನು ಡೆಬೊಪ್ರಿಯಾ ಬಿಸ್ವಾಸ್​ (27) ಎಂದು ಗುರುತಿಸಲಾಗಿದೆ. ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದು, ಗಂಭೀರವಾಗಿ ಗಾಯಗೊಂಡಿದ್ದ ಡೆಬೊಪ್ರಿಯಾಳನ್ನು ಕೋಲ್ಕತದ ಎಸ್​ಎಸ್​ಕೆಎಂ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಡೆಬೊಪ್ರಿಯಾ, ಕೋಲ್ಕತ್ತಾದ ಪ್ರಗತಿ ಮೈದಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಟ್ರೋಪಾಲಿಟನ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಸಹೋದರಿಯೊಂದಿಗೆ ನೆಲೆಸಿದ್ದಳು. ಕಳೆದ ಎರಡು ವರ್ಷಗಳಿಂದ ನಿಯಮಿತವಾಗಿ ಕೆಲಸ ಸಿಗುತ್ತಿರಲಿಲ್ಲ. ಇದರಿಂದ ಆಕೆ ಖಿನ್ನತೆಗೆ ಜಾರಿದ್ದಳು. ಇದೀಗ ಅದೇ ನೋವಿನಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾಳೆ. (ಏಜೆನ್ಸೀಸ್​)