ನ್ಯೂಸ್

ಗಾಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ, ಬುಧವಾರದಿಂದ ಮೂರು ದಿನ ವಾಹನ ಸಂಚಾರ ನಿರ್ಬಂಧ

ಬೆಂಗಳೂರು: ಮೈಸೂರು ರಸ್ತೆ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಬುಧವಾರದಿಂದ ಮೂರು ದಿನ ನಡೆಯಲಿದ್ದು, ಹೆಚ್ಚಿನ ಭಕ್ತರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಕಿಂಕೋ ಜಂಕ್ಷನ್‌ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್‌ವರೆಗೆ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.

ಬುಧವಾರ ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಗೆ ಸಾಗುವ ವಾಹನಗಳು ಎಂದಿನಂತೆ ಮೈಸೂರು ಮುಖ್ಯರಸ್ತೆಯಲ್ಲಿ ಚಲಿಸಬಹುದು.

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ಮೈಸೂರು ಕಡೆಗೆ ಸಾಗುವ ವಾಹನಗಳಿಗೆ ಹೊಸಗುಡ್ಡದಹಳ್ಳಿ ಜಂಕ್ಷನ್‌ನಿಂದ ಕಿಂಕೋ ಜಂಕ್ಷನ್‌ವರೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಪರ್ಯಾಯ ಮಾರ್ಗವಾಗಿ ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಆವಲಹಳ್ಳಿ ಮುಖ್ಯ ರಸ್ತೆ ಮೂಲಕ ಬೆಂಗಳೂರು ಒನ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆಇಬಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಪಿಇಎಸ್‌ಐಟಿ ಕಾಲೇಜು, ದೇವೇಗೌಡ ಸರ್ಕಲ್ ಮುಖಾಂತರ ನಾಯಂಡಹಳ್ಳಿ ಹತ್ತಿರ ಎಡ ತಿರುವು ಪಡೆದು ಮೈಸೂರು ರಸ್ತೆ ತಲುಪಲು ಅವಕಾಶ ಕಲ್ಪಿಸಲಾಗಿದೆ.

18, 19ಕ್ಕೆ ನಿರ್ಬಂಧ:

ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ನಗರಕ್ಕೆ ಪ್ರವೇಶಿಸುವ ಎಲ್ಲ ಮಾದರಿ ವಾಹನಗಳನ್ನು 18 ಮತ್ತು 19ರಂದು ಕಿಂಕೋ ಜಂಕ್ಷನ್‌ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್‌ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ನಗರ ಪ್ರವೇಶಿಸುವ ಎಲ್ಲ ಮಾದರಿ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ನಾಗರಬಾವಿ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ಚಂದ್ರಾ ಲೇಔಟ್ 80 ಅಡಿ ರಸ್ತೆಯಲ್ಲಿ ಚಲಿಸಿ, ವೆಸ್ಟ್ ಆ್ ಕಾರ್ಡ್ ರಸ್ತೆಯ ಮುಖಾಮತರ ಮುಂದೆ ಸಾಗಿ ಎಂ.ಸಿ. ಸರ್ಕಲ್ ಬಳಿ ಬಲತಿರುವು ಪಡೆದು ಮಾಗಡಿ ರಸ್ತೆಗೆ ತಲುಪಬಹುದು.