ನ್ಯೂಸ್

ಉಪಗ್ರಹದ ಶೇ.100 ಬಿಡಿಭಾಗ ಭಾರತದಲ್ಲೇ ತಯಾರಿಕೆಗೆ ಗುರಿ: ಎಂ.ಶಂಕರನ್ ಹೇಳಿಕೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಉಡ್ಡಯನ ಮಾಡುವ ಉಪಗ್ರಹಗಳ ಶೇ.100 ಬಿಡಿಭಾಗಗಳನ್ನು ಭಾರತದಲ್ಲೇ ತಯಾರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ.ಶಂಕರನ್ ತಿಳಿಸಿದ್ದಾರೆ.

ನಗರದ ಹೊರವಲಯ ಜಿಗಣಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಜ್ರಿ ಇಂಜನಿಯರಿಂಗ್ ಕಂಪನಿ ತಯಾರಿಸಿರುವ ಉಪಗ್ರಹಗಳಿಗೆ ಬಳಸಲಾಗುವ ಹೊಸ ಮಾದರಿಯ ಶಾಖದ ಕೊಳವೆಗಳನ್ನು ಇಸ್ರೋ ಪರವಾಗಿ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ಇಸ್ರೋ ಹಾರಿಬಿಡುತ್ತಿರುವ ಉಪಗ್ರಹಗಳ ಶೇ.60 ಬಿಡಿಭಾಗಗಳು ಭಾರತದಲ್ಲೇ ತಯಾರಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಶೇ.100 ಪ್ರಗತಿ ಸಾಧಿಸಲು ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ವಾವಲಂಬನೆಯತ್ತ ಇಸ್ರೋ ಹೆಜ್ಜೆ ಇಟ್ಟಿದೆ. ಉಪಗ್ರಹದ ಎಲ್ಲ ಬಿಡಿಭಾಗಗಳನ್ನು ತಯಾರಿಸುವ ಸಾಮರ್ಥ್ಯ ಭಾರತಕ್ಕಿದ್ದು, ಇದು ಶೀಘ್ರವೇ ಸಾಕಾರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಾಹ್ಯಾಕಾಶದಲ್ಲಿ ಉಪಗ್ರಹಗಳು ಸಾಗುವಾಗ ಅಲ್ಲಿನ ಉಷ್ಣಾಂಶ ಪ್ರಮುಖ ಪಾತ್ರ ವಹಿಸುತ್ತದೆ. ಜತೆಗೆ ಉಪಗ್ರಹಗಳಿಂದ ಶಾಖವನ್ನು ಹೊರಹಾಕುವ ಜವಾಬ್ದಾರಿಯೂ ಮಹತ್ವದಾಗಿರುತ್ತದೆ. ಈ ನಿಟ್ಟಿನಲ್ಲಿ ಶಾಖವನ್ನು ಹೊರದೂಡುವ ಕೊಳವೆಗಳು ಸಮರ್ಥ ಹಾಗೂ ಪೂರ್ಣ ಪ್ರಮಾಣದಲ್ಲಿ ಪ್ರಮಾಣಿಸಿರುವ ಕೊಳವೆಗಳನ್ನು ಬಳಸಬೇಕಾಗುತ್ತಿದೆ. ಹೀಗಾಗಿ ಉಪಗ್ರಹದ ಪ್ರತಿಯೊಂದು ಬಿಡಿಭಾಗದತ್ತ ಇಸ್ರೋ ಹೆಚ್ಚಿನ ಕಾಳಜಿ ವಹಿಸುತ್ತದೆ ಎಂದು ಎಂ.ಶಂಕರನ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಅಜ್ರಿ ಇಂಜಿನಿಯರಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್ ಬಿ. ಅಜ್ರಿ, ಅನೀಶ್ ಮೆಹ್ತಾ ಹಾಗೂ ಮತ್ತಿತರರಿದ್ದರು.

ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ಚಂದ್ರಯಾನ-3 ರಯಶಸ್ವೀ ಉಡಾವಣೆ ತಂಡದಲ್ಲಿರುವ ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ.ಶಂಕರನ್, ಸಹ ನಿರ್ದೇಶಕ ಡಾ.ಅಲೋಕ್‌ಕುಮಾರ್ ಶ್ರೀವಾಸ್ತವ, ನಿಯಂತ್ರಕಿ ಅಂಜಲಿ ಎಲಿಸ್ ಶಂಕರ್, ಲಿಯೋಸ್ ನಿರ್ದೇಶಕ ಡಾ. ಶ್ರೀರಾಮ ಕೆ.ವಿ, ಉಪನಿರ್ದೇಶಕರಾದ ಸುರೇಶ್‌ಕುಮಾರ್ ಎಚ್.ಎನ್, ಬಸವರಾಜ ಎಸ್. ಅಕ್ಕಿಮರಡಿ, ಉಷ್ಣ ವ್ಯವಸ್ಥೆಗಳ ಸಮೂಹದ ನಿರ್ದೇಶಕ ರಾಜೇಂದ್ರ ಎ. ಹಾಗೂ ಸಿಬಿಪಿಒ-ಇಸ್ರೋ ಕೇಂದ್ರ ಕಚೇರಿಯ ನಿರ್ದೇಶಕ ಸುಧೀರ್‌ಕುಮಾರ್ ಎನ್ ಅವರನ್ನು ಸನ್ಮಾನಿಸಲಾಯತು.