ನವದೆಹಲಿ: ಲಾಕ್ಡೌನ್ ನೆಪವೊಡ್ಡಿ ಕೆಲವು ಇಂಜಿನಿಯರಿಂಗ್, ಟೆಕ್ ಶಿಕ್ಷಣ ಸಂಸ್ಥೆಗಳು ಉದ್ಯೋಗಿಗಳಿಗೆ ವೇತನ ವಿಳಂಬ ಮಾಡುತ್ತಿರುವ ಕುರಿತು ದೂರುಗಳನ್ನು ಪರಿಶೀಲಿಸಿರುವ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್(ಎಐಸಿಟಿಇ), ನೆಪ ಹೇಳದೆ ಎಲ್ಲ ಉದ್ಯೋಗಿಗಳಿಗೂ ಸರಿಯಾದ ಸಮಯಕ್ಕೆ ವೇತನ ಪಾವತಿಸಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಕೆಲವು ಶಿಕ್ಷಣ ಸಂಸ್ಥೆಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ವೇತನವನ್ನೂ ಪಾವತಿಸಿಲ್ಲ. ಈ ಕುರಿತು ಸಾಕಷ್ಟು ದೂರುಗಳು ಬಂದಿವೆ. ಸದ್ಯ ರಾಷ್ಟ್ರೀಯ ತುರ್ತುಪರಿಸ್ಥಿತಿ ಇದ್ದು, ಕೋವಿಡ್ 19 ಕಾರಣಕ್ಕೆ ಇಡೀ ದೇಶ ಒತ್ತಡದಲ್ಲಿದೆ. ಇಂತಹ ಸನ್ನಿವೇಶದಲ್ಲಿ ವೇತನವನ್ನು ತಡೆಹಿಡಿದರೆ ಒತ್ತಡ ಇನ್ನಷ್ಟು ಹೆಚ್ಚಲಿದೆ. ಅಲ್ಲದೆ, ಆ ಉದ್ಯೋಗಿಗಳ ಕುಟುಂಬ ಉಪವಾಸ ಇರಬೇಕಾದೀತು.ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಉದ್ಯೋಗಿಗಳಿಗೂ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗಿದೆ ಎಂಬುದನ್ನು ಆಯಾ ಆಡಳಿತ ಮಂಡಳಿ ಖಾತರಿಪಡಿಸಿಕೊಳ್ಳಬೇಕು ಎಂದು ಎಐಸಿಟಿಇ ಚೇರ್ಮನ್ ಅನಿಲ್ ಸಹಸ್ರಬುದ್ಧೆ ಎಐಸಿಟಿಇ ಮಾನ್ಯತೆ ಪಡೆದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ದೇಶಾದ್ಯಂತ ಮಾರ್ಚ್ 16ರಿಂದ ಕಾಲೇಜುಗಳು ಮುಚ್ಚಲ್ಪಟ್ಟಿವೆ. ಲಾಕ್ ಡೌನ್ ಮಾರ್ಚ್ 24ರಂದು ಆರಂಭವಾಗಿದ್ದು, ಮೇ 17ರ ತನಕ ವಿಸ್ತರಿಸಲ್ಪಟ್ಟಿದೆ. ಕಳೆದ ತಿಂಗಳಷ್ಟೇ ವಿದ್ಯಾರ್ಥಿಗಳಿಂದ ಈ ಅವಧಿಯಲ್ಲಿ ಶುಲ್ಕ ಸ್ವೀಕರಿಸದಂತೆ ಮತ್ತು ಉದ್ಯೋಗಿಗಳಿಗೆ ವೇತನವನ್ನು ಸರಿಯಾಗಿ ಪಾವತಿಸುವಂತೆ ಎಐಸಿಟಿಇ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಎಚ್ಚರಿಕೆಯನ್ನೂ ನೀಡಿತ್ತು.