ಶಿವಮೊಗ್ಗ: ನಿನ್ನೆ ತೀರ್ಥಹಳ್ಳಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಗುಡುಗಿದ್ದ ಆರಗ ಜ್ಞಾನೇಂದ್ರ, AICC ಅಧ್ಯಕ್ಷರ ಮೈಬಣ್ಣದ ಕುರಿತಾಗಿ ಕಾಮೆಂಟ್ ಮಾಡಿದ್ದು ವಿವಾದ ಸೃಷ್ಟಿಸಿದೆ.
ಪ್ರತಿಭಟನಾ ನಿರತ ಆರಗ ಜ್ಞಾನೇಂದ್ರ, "ಎಲ್ಲಿ ಫಾರೆಸ್ಟ್ ಇಲ್ಲವೋ ಅಲ್ಲಿಯವರು ಅರಣ್ಯ ಸಚಿವರಾಗಿದ್ದಾರೆ. ಅವರು ಸುಟ್ಟು ಕರಕಲಾಗಿರುತ್ತಾರೆ. ಅವರ ಬಣ್ಣವನ್ನು ನೋಡಿದರೆ ಗೊತ್ತಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಈಶ್ವರ್ ಖಂಡ್ರೆ ಅವರನ್ನು ನೋಡಿದರೆ ಸುಟ್ಟು ಕರಕಲಾಗಿದ್ದು ಗೊತ್ತಾಗುತ್ತದೆ. ಪಾಪ ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ" ಎಂದು ಆರಗ ಜ್ಞಾನೇಂದ್ರ ಅವಹೇಳನ ಮಾಡಿದ್ದರು.
ಇದನ್ನೂ ಓದಿ: AI ಮೂಲಕ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸರ್ಕಾರ ಬದ್ಧವಾಗಿದೆ: ಪ್ರಿಯಾಂಕ್ ಖರ್ಗೆ
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಕಾಂಗ್ರೆಸ್, "ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಆರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿ ತೋರಿಸಿದ್ದಾರೆ. ಮೈಬಣ್ಣದ ಬಗ್ಗೆ ಅವಹೇಳನ ಮಾಡುವ ಮೂಲಕ ಕೇವಲ ಖರ್ಗೆಯವರನ್ನಲ್ಲದೇ, ಮೂಲ ನಿವಾಸಿ ದಲಿತರಿಗೆ ಅವಮಾನ ಮಾಡಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದಲ್ಲಿ ಕೂಡಲೇ ಆರಗ ಜ್ಞಾನೇಂದ್ರ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಆಗ್ರಹ ಮಾಡಿದ್ದು ಅದರೊಂದಿಗೆ, ಆರಗ ಜ್ಞಾನೇಂದ್ರ ಕೂಡಲೇ ಮಲ್ಲಿಕಾರ್ಜುನ ಖರ್ಗೆ ಹಾಗೂ ದಲಿತರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.