ನ್ಯೂಸ್

ಚುನಾವಣೆ ಘೊಷಣೆ ಬೆನ್ನಲ್ಲೇ ಜೋರಾದ ಲೆಕ್ಕಾಚಾರ: ತಮಿಳುನಾಡಿನಲ್ಲಿ ಕರುಣಾನಿಧಿ, ಜಯಾ ಇಲ್ಲದ ಎಲೆಕ್ಷನ್

ನವದೆಹಲಿ: ತಮಿಳುನಾಡಿಗೆ ಇದು ವಿಶೇಷ ಚುನಾವಣೆ. ರಾಜ್ಯ ರಾಜಕೀಯದಲ್ಲಿ ಆಧಿಪತ್ಯ ಸ್ಥಾಪಿಸಿದ್ದ ಡಿಎಂಕೆಯ ಆಗ್ರೇಸರ ಎಂ.ಕರುಣಾನಿಧಿ ಮತ್ತು ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಇಬ್ಬರೂ ಇಲ್ಲದ ಚುನಾವಣೆ ಇದಾಗಿದೆ. ಹೀಗಾಗಿ ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಡಿಎಂಕೆಯ ಎಂ.ಕೆ. ಸ್ಟಾಲಿನ್ ಮಧ್ಯೆ ಈಗ ಗದ್ದುಗೆ ಗುದ್ದಾಟ ಏರ್ಪಟ್ಟಿದೆ.

ಜನೋಪಯೋಗಿ ಯೋಜನೆ ಗಳನ್ನು ಪ್ರಕಟಿಸುತ್ತಿರುವ ಪಳನಿಸ್ವಾಮಿ ತಕ್ಕಮಟ್ಟಿಗೆ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸಿದ್ದಲ್ಲದೆ, ಪ್ರಾಕೃತಿಕ ವಿಕೋಪದಿಂದ ನಷ್ಟಕ್ಕೊಳಗಾದ ರೈತರಿಗೆ -ಠಿ;1715 ಕೋಟಿ ಪರಿಹಾರ, -ಠಿ;12,110 ಕೋಟಿ ಸಾಲಮನ್ನಾ ಯೋಜನೆ ಮೂಲಕ ಜನಮನ ಗೆದ್ದಿದ್ದಾರೆ. ಮೈತ್ರಿ ಪಕ್ಷ ಪಿಎಂಕೆ ಸೇರಿ ತಮ್ಮ ಮತಬ್ಯಾಂಕ್ ರಕ್ಷಿಸಲೆಂದೇ ವನ್ನಿಯಾರ್ ಸಮುದಾಯಕ್ಕೆ ಶೇ. 10.5 ಒಳಮೀಸಲಾತಿ ಕಲ್ಪಿಸಿದೆ. ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡುವುದಕ್ಕೆ ಒಂದು ದಿನಕ್ಕೆ ಮುನ್ನ ಸರ್ಕಾರ ಈ ಬಗ್ಗೆ ಅಧಿಸೂಚನೆ ಜಾರಿ ಮಾಡಿದೆ. ಏತನ್ಮಧ್ಯೆ, ಶಶಿಕಲಾ ಜೈಲಿನಿಂದ ಹೊರಬಂದಿದ್ದರೂ, ಆಕೆಯ ಆಪ್ತ ಹಾಗೂ ಜಯಲಲಿತಾ ಸಂಬಂಧಿ ಟಿಟಿವಿ ದಿನಕರನ್ ಹುಟ್ಟುಹಾಕಿರುವ ಎಎಂಎಂಕೆ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಬಿಜೆಪಿಗೆ 15 ಸೀಟು?: ಮೈತ್ರಿ ಪಕ್ಷ ಬಿಜೆಪಿಗೆ 15 ಕ್ಷೇತ್ರಗಳಲ್ಲಿ ಟಿಕೆಟ್ ಹಂಚುವ ಪ್ರಸ್ತಾವವನ್ನು ಎಐಎಡಿಎಂಕೆ ಮುಂದಿಟ್ಟಿದೆ. ಆದರೆ, ಬಿಜೆಪಿ ನಾಯಕರು 60 ಸೀಟುಗಳನ್ನು ನಿರೀಕ್ಷೆ ಮಾಡುತ್ತಿರುವುದರಿಂದ ಈ ಕುರಿತು ಉಭಯ ಪಕ್ಷಗಳ ಮಧ್ಯೆ ಮತ್ತೊಂದಿಷ್ಟು ದಿನ ಮಾತುಕತೆ ಮುಂದುವರಿಯುವ ಸಾಧ್ಯತೆಯಿದೆ. ಬಿಜೆಪಿ ಅಭ್ಯರ್ಥಿಗಳಿಗೆ ನೀಡುವ ಸಂಭಾವ್ಯ ಕ್ಷೇತ್ರಗಳಲ್ಲಿ ಕನ್ಯಾಕುಮಾರಿ, ಕೊಯಮತ್ತೂರು ಮತ್ತು ಚೆನ್ನೈನ ಕೆಲ ಸ್ಥಾನಗಳಿವೆ. 15ಕ್ಕಿಂತ ಹೆಚ್ಚು ಸೀಟುಗಳನ್ನು ನೀಡಲು ಎಐಎಡಿಎಂಕೆ ಒಪ್ಪುತ್ತಿಲ್ಲವಾದರೂ ಚೌಕಾಶಿ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗುತ್ತದೆಯಾ ಕಾದು ನೋಡಬೇಕು. ಪಟ್ಟಾಳಿ ಮಕ್ಕಳ್ ಕಾಚಿ (ಪಿಎಂಕೆ) ಪಕ್ಷಕ್ಕೆ 25 ಸೀಟು ನೀಡುವುದಾಗಿ ಎಐಎಡಿಎಂಕೆ ಹೇಳಿದ್ದರೂ, ಪಿಎಂಕೆ ಮುಖಂಡರು 30ಕ್ಕಿಂತ ಕಡಿಮೆ ಒಪ್ಪುವುದಿಲ್ಲ ಎಂಬ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್-ಡಿಎಂಕೆಗೆ ಸವಾಲು: ಚುನಾವಣೆ ದಿನಾಂಕವನ್ನು ಮಾರ್ಚ್ ಮೊದಲ ವಾರದಲ್ಲಿ ಪ್ರಕಟಿಸಬಹುದು ಎಂದುಕೊಂಡಿದ್ದ ಕಾಂಗ್ರೆಸ್​ಗೆ ಈಗ, ಕ್ಷೇತ್ರ ಹಂಚಿಕೆ ಬಗ್ಗೆ ಡಿಎಂಕೆ ಜತೆಗೆ ಶೀಘ್ರದಲ್ಲಿ ಮಾತುಕತೆ ಪೂರ್ಣಗೊಳಿಸುವ ಸವಾಲಿದೆ. ಕಳೆದ ಬಾರಿ 41 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಈ ಬಾರಿ 50ಕ್ಕಿಂತಲೂ ಹೆಚ್ಚು ಸೀಟುಗಳನ್ನು ಕೇಳುತ್ತಿದ್ದರೂ ಡಿಎಂಕೆ ನಾಯಕರು ಮಾತ್ರ ಇದು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.

ರಾಹುಲ್ ಗಾಂಧಿ ವಾಗ್ದಾಳಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್​ಎಸ್​ಎಸ್) 6 ವರ್ಷಗಳಲ್ಲಿ ಚುನಾಯಿತ ಸಂಸ್ಥೆಗಳು ಮತ್ತು ಪತ್ರಿಕಾ ಮಾಧ್ಯಮಗಳ ಮೇಲೆ ವ್ಯವಸ್ಥಿತ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ತಮಿಳುನಾಡಿನ ತೂತುಕುಡಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವವು ಅಬ್ಬರದಿಂದ ಸಾಯುವುದಿಲ್ಲ, ಆರ್​ಎಸ್​ಎಸ್ ಸಾಂಸ್ಥಿಕ ಸಮತೋಲನವನ್ನು ನಾಶ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಚೀನಾಕ್ಕೆ ಅಂಜುತ್ತಾರೆ ಎಂದೂ ಟೀಕಿಸಿದ್ದಾರೆ.

ಬಿಜೆಪಿ ಎರಡಂಕಿ ದಾಟುವುದಿಲ್ಲ

  • ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ ಎರಡಂಕಿ ದಾಟುವುದಿಲ್ಲ ಎಂದು ಟಿಎಂಸಿ ಪರ ಚುನಾವಣಾ ಪ್ರಚಾರಭಿಯಾನದ ಕಾರ್ಯತಂತ್ರ ರೂಪಿಸಿರುವ ಪ್ರಶಾಂತ್ ಕಿಶೋರ್ ಪುನರುಚ್ಚರಿಸಿದ್ದಾರೆ. ಮೇ 2ರಂದು ನನ್ನ ಅಂತಿಮ ಟ್ವೀಟ್ ನಿರೀಕ್ಷಿಸಿ ಎಂದಿರುವ ಪ್ರಶಾಂತ್ ಕಿಶೋರ್, ಬಂಗಾಳ ತನ್ನ ಮಗಳನ್ನೇ (ಮಮತಾ ಬ್ಯಾನರ್ಜಿ) ಆಯ್ಕೆ ಮಾಡಲಿದೆ ಎಂದು ಖಚಿತವಾಗಿ ಹೇಳಿದ್ದಾರೆ.
  • ಬಿಜೆಪಿಯ ಲೋಖೋ ಸೋನಾರ್ ಬಂಗಾಳ ರಥಗಳನ್ನು ಕಡಪರಾ ಎಂಬಲ್ಲಿ ಧ್ವಂಸಗೊಳಿಸಲಾಗಿದೆ. ಟಿಎಂಸಿ ಬೆಂಬಲಿಗರು ಪಕ್ಷದ ಗೋದಾಮಿನೊಳಗೆ ಪ್ರವೇಶಿಸಿ ವಾಹನಕ್ಕೆ ಹಾನಿಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
  • ಅಸ್ಸಾಂನಲ್ಲಿ ಆರ್​ಜೆಡಿ ಸ್ಪರ್ಧಿಸಲಿದೆ. ಸಮಾನ ಮನಸ್ಕ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಪಕ್ಷದ ಯುವ ನಾಯಕ ತೇಜಸ್ವಿಯಾದವ್ ಹೇಳಿದ್ದಾರೆ.
  • ಚೆನ್ನೈನ ಚೆಪಾಕ್ ಕ್ಷೇತ್ರದಿಂದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಪುತ್ರ ಉದಯನಿಧಿ ಸ್ಪರ್ಧಿಸಲ್ಲಿದ್ದಾರೆ ಎನ್ನಲಾಗಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಖಷ್ಬೂ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.