| ಕೀರ್ತಿನಾರಾಯಣ ಸಿ. ಬೆಂಗಳೂರು
ಬಡವರು, ಕೂಲಿಕಾರ್ವಿುಕರ ಆರ್ಥಿಕ ಸಬಲೀಕರಣ, ಹಳ್ಳಿಗಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಅವ್ಯವಹಾರ ಎಸಗಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿರುವ ವಿಚಾರವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂತಹ ಅಕ್ರಮಗಳನ್ನು ಪತ್ತೆ ಹೆಚ್ಚಿ ಸರ್ಕಾರದ ಹಣ ಭ್ರಷ್ಟರ ಜೇಬು ಸೇರದಂತೆ ತಡೆಯುವ ಜವಾಬ್ದಾರಿಯನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಹೆಗಲಿಗೆ ವಹಿಸಿದೆ.
ಆರೋಗ್ಯ, ಕೃಷಿ, ಶೈಕ್ಷಣಿಕ, ಬ್ಯಾಂಕಿಂಗ್, ಇ-ಕಾಮರ್ಸ್, ಕೈಗಾರಿಕೆ ಸೇರಿ ಬಹುತೇಕ ಕ್ಷೇತ್ರಗಳಿಗೆ ಕಾಲಿಟ್ಟಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲೂ ಕಾರ್ಯಾರಂಭಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ-ಜಿ), ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ (ಪಿಎಂಜಿಎಸ್ವೈ), ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ) ಮತ್ತು ಮಹಾತ್ಮಾ ಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ (ಎಂಜಿ- ನರೇಗಾ) ಯೋಜನೆಗಳ ಜಾರಿಯಲ್ಲಿ ಅಕ್ರಮ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಎ.ಐ. ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಒಂದೆಡೆ ಎ.ಐ. ತಂತ್ರಜ್ಞಾನದ ದುರ್ಬಳಕೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಅನುಕೂಲತೆಗಳೂ ಸಹ ಹೆಚ್ಚಾಗುತ್ತಿದೆ. ಸರ್ಕಾರಿ ಸ್ಕೀಂಗಳ ಜಾರಿಯಲ್ಲಿ ಎ.ಐ. ತಂತ್ರಜ್ಞಾನ ಬಳಕೆಗೆ ಕೇಂದ್ರ ಸರ್ಕಾರ ಸಾಕಷ್ಟು ಒತ್ತು ಕೊಡುತ್ತಿದೆ. ಆಕ್ಸ್ಫರ್ಡ್ ಎ.ಐ. ರೆಡಿನೆಸ್ ಇಂಡೆಕ್ಸ್ ಪ್ರಕಾರ ಭಾರತ 40ನೇ ರ್ಯಾಂಕ್ನಲ್ಲಿದೆ. ಸ್ಟ್ಯಾನ್ಪೋರ್ಡ್ ಎ.ಐ. ಸೂಚ್ಯಂಕ ವರದಿ ಅನ್ವಯ ಎ.ಐ. ಕೌಶಲ್ಯ ಬಳಕೆ ಪ್ರಮಾಣದಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ. 2026ರ ವೇಳೆಗೆ 500 ಶತಕೋಟಿ ಎಐ ಅವಕಾಶ ಸೃಷ್ಟಿಯಾಗಲಿದೆ. ಈಗ ಸರ್ಕಾರಿ ಯೋಜನೆಗಳ ಅವ್ಯವಹಾರ ಪತ್ತೆಹಚ್ಚಲು ಎಐ ರೆಡಿಯಾಗಿದೆ.
ಎಐ ಮಿಷನ್ಗೆ 551 ಕೋಟಿ ಮೀಸಲು: 2024-25ರ ಕೇಂದ್ರ ಬಜೆಟ್ನಲ್ಲಿ ಇಂಡಿಯಾ ಎಐ ಮಿಷನ್ಗಾಗಿಯೇ 551.75 ಕೋಟಿ ರೂ. ಮೀಸಲಿಟ್ಟಿದೆ. ಕೃತಕ ಬುದ್ಧಿಮತ್ತೆ ಸಂಶೋಧನೆ ಮತ್ತು ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಆದ್ಯತೆ ಕೊಟ್ಟಿದೆ. ಇದಲ್ಲದೆ 2023-24ರ ಬಜೆಟ್ನಲ್ಲಿ ಘೊಷಿಸಲಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ 3 ಕೇಂದ್ರಗಳ ಸ್ಥಾಪನೆಗೆ 2024-25ನೇ ಸಾಲಿನಲ್ಲಿ 255 ಕೋಟಿ ರೂ. ಮಂಜೂರು ಮಾಡುವ ಮೂಲಕ ಕೇಂದ್ರ ಸರ್ಕಾರ ಎಐ ತಂತ್ರಜ್ಞಾನ ಬಳಕೆಗೆ ಪ್ರಮುಖ ಆದ್ಯತೆಯನ್ನು ನೀಡುತ್ತಿದೆ.
ಆರೋಗ್ಯ ಇಲಾಖೆಯಲ್ಲಿ ಯಶಸ್ವಿ: ಆಯುಷ್ಮಾನ್ ಭಾರತ ಯೋಜನೆ ಅಕ್ರಮ ಪತ್ತೆಯಲ್ಲಿ ಎಐ ಯಶಸ್ವಿಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಎಂಪಾನೆಲ್ಡ್ (ನೋಂದಣಿ) ಆಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಫಲಾನುಭವಿಗಳು 5 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ಪಡೆಯಬಹುದು. ನಗದು ರಹಿತವಾಗಿ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳು, ನಂತರ ಕ್ಲೈಂ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಹಣ ಪಡೆಯುತ್ತವೆ. ನಕಲಿ ವೈದ್ಯಕೀಯ ಬಿಲ್ಗಳನ್ನು ಸಲ್ಲಿಸಿ ಹಣ ಕ್ಲೈಂ ಮಾಡಿರುವುದನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪತ್ತೆಹಚ್ಚಿದೆ.
ಅವ್ಯವಹಾರ ಬೆಳಕಿಗೆ: ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನದ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿಯ (ಎಸ್ಎಯು) ಪರಿಶೀಲನೆ ನಡೆಸಲಾಗಿತ್ತು. 2022-23ನೇ ಸಾಲಿನಲ್ಲಿ ಕರ್ನಾಟಕದಲ್ಲಿ ನರೇಗಾ ಯೋಜನೆಯೊಂದರಲ್ಲೇ 181 ಕೋಟಿ ರೂ. ಅವ್ಯವಹಾರ ದೃಢಪಟ್ಟಿದೆ. ದೇಶಾದ್ಯಂತ ನರೇಗಾ ಯೋಜನೆ ಅಕ್ರಮಕ್ಕೆ ಸಂಬಂಧಿಸಿದಂತೆ 4.92 ಲಕ್ಷ ಪ್ರಕರಣ ದಾಖಲಾಗಿದ್ದು, 1102 ಕೋಟಿ ರೂ. ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ಅದೇ ರೀತಿ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಗಳಲ್ಲೂ ದೊಡ್ಡಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿವೆ. ಹೀಗಾಗಿ ಅಕ್ರಮ ತಡೆಯಲು ಸರ್ಕಾರ ಎಐ ತಂತ್ರಜ್ಞಾನದ ಮೊರೆ ಹೋಗಿದೆ.
ಯಾವ ಯೋಜನೆಗಳಲ್ಲಿ ಅಕ್ರಮ?
* ಪಿಎಂಎವೈ-ಜಿ ಯೋಜನೆಯಡಿ ವಸತಿ ನಿರ್ಮಾಣ ಕಾಮಗಾರಿ ಹೆಸರಲ್ಲಿ ನಡೆದಿದೆ ವಂಚನೆ
* ಪಿಎಂಜಿಎಸ್ವೈ ಯೋಜನೆಯಲ್ಲಿ ರಸ್ತೆ ಕಾಮಗಾರಿಗಳನ್ನು ನಡೆಸದೆಯೇ ಹಣ ಬಿಡುಗಡೆ
* ಡಿಡಿಯು-ಜಿಕೆವೈ ಯೋಜನೆಯಲ್ಲಿ ಸರ್ಕಾರಕ್ಕೆ ನಕಲಿ ದಾಖಲಾತಿಗಳನ್ನು ಸಲ್ಲಿಸಿ ಮೋಸ
*ನರೇಗಾ ಯೋಜನೆಯಲ್ಲಿ ಯಾವುದೇ ಕೆಲಸ ಮಾಡದೆ ಮಾಡಿರುವುದಾಗಿ ತೋರಿಸಿ ವಂಚನೆ
ಅಕ್ರಮ ಪತ್ತೆ ಹೇಗೆ?
* ಅವ್ಯವಹಾರ ಪತ್ತೆಗಾಗಿ ಎಐ ಹಾಗೂ ಮಶಿನ್ ಲರ್ನಿಂಗ್ ಅಳವಡಿಕೆ
* ಆವಾಸ್ ಸಾಫ್ಟ್ , ಏರಿಯಾ ಆಫೀಸರ್ ಆಪ್ ಅಭಿವೃದ್ಧಿ
* ಕಾಮಗಾರಿಗಳು ನಡೆದಿದೆ ಎಂಬ ಪ್ರತಿ ದಾಖಲೆ ಪರಿಶೀಲಿಸಲಾಗುತ್ತದೆ
* ದಾಖಲಾತಿಗಳು ನಕಲಿಯಾಗಿದ್ದರೆ ತಕ್ಷಣ ಗುರುತ್ತಿಸುತ್ತದೆ
*ಅನುಮಾನಾಸ್ಪದ ಆರ್ಥಿಕ ವಹಿವಾಟು, ಪಾವತಿ ಪತ್ತೆ ಕಾರ್ಯ ಇನ್ನು ಸುಲಭ
* ನರೇಗಾ ಕಾಮಗಾರಿ ಸ್ಥಳದ ಫೋಟೋ ನೈಜತೆ ಬೆಳಕಿಗೆ
ಯಾವ ಯೋಜನೆಗಳಲ್ಲಿ ಎಐ ಜಾರಿ?
* ಜಿಎಸ್ಟಿಎನ್, ಸರ್ಕಾರಿ ಇ-ಮಾರುಕಟ್ಟೆಯಲ್ಲಿನ ವಂಚನೆ ಪತ್ತೆ
* ಭಾಷಾ ಸೇವೆಗೆ ರಾಷ್ಟ್ರೀಯ ಭಾಷಾ ತಂತ್ರಜ್ಞಾನ ಮಿಷನ್ ಜಾರಿ
* ಭಾರತದ 10 ಭಾಷೆ ,350 ಎಐ ಭಾಷಾ ಮಾದರಿ ಬಿಡುಗಡೆ
* ರೈತರಿಗೆ ಪಿಎಂ ಕಿಸಾನ್ ಯೋಜನೆ ಮಾಹಿತಿ ನೀಡಲು ಕ್ರಮ
* 11 ಭಾರತೀಯ ಭಾಷೆಗಳಲ್ಲಿ ಎಐ ಸಕ್ರಿಯಗೊಳಿಸಲಾಗಿದೆ
* ಸುಪ್ರೀಂ ತೀರ್ಪು ಪ್ರಾದೇಶಿಕ ಭಾಷೆ ಅನುವಾದಕ್ಕೆ ಎಐ ನೆರವು
* ಸುವಾಸ್ ಆಪ್ ಅಭಿವೃದ್ಧಿಪಡಿಸಿ ಎಐ ಬಳಕೆಗೆ ಅವಕಾಶ
* ಎಐ ಆಧಾರಿತ ಡಿಜಿಟಲ್ ಸಂಸತ್ ಆಪ್ ಕೂಡ ಅಭಿವೃದ್ಧಿ
* ರೈಲ್ವೆ ಸೇವೆ ಸುಧಾರಿಸುವುದಕ್ಕೆ ಕೂಡ ಕೃತಕ ಬುದ್ಧಿಮತ್ತೆ ಬಳಕೆ