ಪಿಇಎಸ್‌ಐಟಿಎಂ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಷ್ಯೋಪನಯನ ಕಾರ್ಯಕ್ರಮವನ್ನು ಎಸ್.ವೈ.ಅರುಣಾದೇವಿ ಉದ್ಘಾಟಿಸಿದರು ಬಿ.ಆರ್.ಸುಭಾಷ್, ಡಾ. ಆರ್.ನಾಗರಾಜ್, ಡಾ. ಮಹಾದೇವ್ ಪ್ರಸನ್ನ ಇತರರಿದ್ದರು.  
ನ್ಯೂಸ್

ಉದ್ಯೋಗ ಅವಕಾಶಗಳ ಮೇಲೆಯೂ ಪ್ರಭಾವ ಬೀರಿರುವ ಎಐ

ಅರವಿಂದ ಅಕ್ಲಾಪುರ

ಶಿವಮೊಗ್ಗ: ದಶಕದ ಅವಧಿಯಲ್ಲಿ ಎಐ (ಕೃತಕ ಬುದ್ದಿಮತ್ತೆ) ಜಾಗತಿಕವಾಗಿ ವ್ಯಾಪಕ ಪರಿಣಾಮ ಬೀರಿದೆ. ಉದ್ಯೋಗಾವಕಾಶಗಳ ಮೇಲೆಯೂ ತನ್ನ ಪ್ರಭಾವವನ್ನುಂಟು ಮಾಡಿದೆ ಎಂದು ಧಾರವಾಡದ ಐಐಟಿ ನಿರ್ದೇಶಕ ಡಾ. ಮಹದೇವ್ ಪ್ರಸನ್ನ ಹೇಳಿದರು.

ಪಿಇಎಸ್‌ಐಟಿಎಂ ಕಾಲೇಜಿನಲ್ಲಿ 19ನೇ ಬ್ಯಾಚ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮ ಶಿಷ್ಯೋಪನಯನದಲ್ಲಿ ಮಾತನಾಡಿ, ನಾಲ್ಕು ದಶಕದಿಂದ ನಾವು ಕಂಪ್ಯೂಟರ್ ಹಿಂದೆ ಬಿದ್ದಿದ್ದೇವೆ. ಈಗ ವಿಶೇಷ ಸನ್ನಿವೇಶ ಸೃಷ್ಟಿಯಾಗಿದೆ. ಕೃತಕ ಬುದ್ಧಿಮತ್ತೆಯಿಂದ ಉಂಟಾಗಿರುವ ಅನಿಶ್ಚಿತತೆಯನ್ನು ನವ ಇಂಜಿನಿಯರ್‌ಗಳು ಅವಕಾಶವನ್ನಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈಗ ಎಲ್ಲರ ಕೈನಲ್ಲೂ ಮಾಹಿತಿ ಇದೆ. ಹೀಗಾಗಿ ಪ್ರಾಧ್ಯಾಪಕರು ಪಠ್ಯದಲ್ಲಿನ ಅಂಶಗಳನ್ನು ಬೋಧನೆ ಮಾಡುವ ಜತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿದರೆ ಸಾಕು. ಒಂದು ಪ್ರವೇಶ ಪರೀಕ್ಷೆ ವಿದ್ಯಾರ್ಥಿಗಳ ಪ್ರತಿಭೆಯ ಎಲ್ಲ ಅಂಶಗಳಿಗೆ ಕೈಗನ್ನಡಿ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಪಿಇಎಸ್ ಟ್ರಸ್ಟ್‌ನ ಟ್ರಸ್ಟಿ ಎಸ್.ವೈ.ಅರುಣಾದೇವಿ ಮಾತನಾಡಿ, ಅಂಕಗಳು ಮಾತ್ರ ಬದುಕಿನ ಮಾನದಂಡಗಳಲ್ಲ. ಉತ್ತಮ ಸಂಸ್ಕಾರ ಮತ್ತು ದೇಶ ನಿರ್ಮಾಣದ ಸಂಕಲ್ಪವೂ ಮುಖ್ಯವಾಗುತ್ತದೆ. ಉತ್ತಮ ಶಿಕ್ಷಣ ಪಡೆದು ಅತ್ಯುತ್ತಮ ಸಾಧನೆ ಮೂಲಕ ಪಾಲಕರಿಗೆ, ಶಿಕ್ಷಣ ಸಂಸ್ಥೆಗೆ ಗೌರವ ತರುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದರು.

ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜಕ ಡಾ. ಆರ್.ನಾಗರಾಜ ಮಾತನಾಡಿ, ಪಿಇಎಸ್ ಸಂಸ್ಥೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸೇವೆ ಮೂಲಕ ಗುರುತಿಸಿಕೊಂಡಿದೆ. ಸುಸಜ್ಜಿತ ಮೂಲಸೌಕರ್ಯ, ಅನುಭವಿ ಅಧ್ಯಾಪಕ ವೃಂದದವರು ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇನ್ಫೋಸಿಸ್, ಟಾಟಾ, ಟಿಸಿಎಸ್ ಮೊದಲಾದ ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್ ಆಯ್ಕೆ ಮಾಡುತ್ತಿವೆ. ಕಳೆದ ವರ್ಷ 600 ವಿದ್ಯಾರ್ಥಿಗಳು ಕ್ಯಾಂಪಸ್ ಮೂಲಕ ಆಯ್ಕೆಯಾಗಿದ್ದರು ಎಂದು ತಿಳಿಸಿದರು.

ಪಿಇಎಸ್ ಟ್ರಸ್ಟ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಸುಭಾಷ್ ಉಪಸ್ಥಿತರಿದ್ದರು. ಇಂಜಿನಿಯರಿಂಗ್‌ನಲ್ಲಿ 10ನೇ ರ‌್ಯಾಂಕ್ ಪಡೆದ ನಿಹಾರಿಕಾ ಅವರನ್ನು ಅಭಿನಂದಿಸಲಾಯಿತು.