ನ್ಯೂಸ್

ಎಐ, ಸೈಬರ್ ಸೆಕ್ಯುರಿಟಿ ಸಹಕಾರ ಒಡಂಬಡಿಕೆಗೆ ಸಹಿ | Five Years period

ಬೆಂಗಳೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ), ಜೈವಿಕ, ಕ್ವಾಂಟಂ ತಂತ್ರಜ್ಞಾನ, ಸ್ಮಾರ್ಟ್ ಸಿಟಿ, ನವೋದ್ಯಮ, ಉನ್ನತ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಸೇರಿ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಉದ್ದೇಶದಿಂದ ಜರ್ಮನಿಯ ಬವೇರಿಯಾ ಪ್ರಾಂತ್ಯ ಮತ್ತು ರಾಜ್ಯ ಸರ್ಕಾರಗಳು ಒಡಂಬಡಿಕೆ ಮಾಡಿಕೊಂಡಿವೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಬವೇರಿಯಾ ಪರವಾಗಿ ಅಲ್ಲಿಯ ಚಾನ್ಸಲರಿ ಮುಖ್ಯಸ್ಥ ಡಾ.ಪ್ರೋರಿಯನ್ ಹರ್ಮನ್ ಸಹಿ ಹಾಕಿದರು. ಈ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, ‘ಈ ಒಡಂಬಡಿಕೆಯು ಮುಂದಿನ 5 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಇದರ ಅನ್ವಯ ಇಂಡಸ್ಟ್ರಿ 4.0, ವೈಮಾಂತರಿಕ್ಷ, ವೈದ್ಯಕೀಯ ತಂತ್ರಜ್ಞಾನ, ಪರಿಸರ ತಂತ್ರಜ್ಞಾನ, ನಗರ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಮತ್ತು ನೇಮಕ, ಉದ್ಯಮಶೀಲತೆ, ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಸ್ಥಾಪನೆಯಾಗಲಿದೆ ಎಂದಿದ್ದಾರೆ.

ಹೂಡಿಕೆಗೆ ಉತ್ತೇಜನ

ಬವೇರಿಯಾದ ಸಚಿವರಿಗೆ ರಾಜ್ಯದ ಕೈಗಾರಿಕಾ ಕಾರ್ಯಪರಿಸರದ ಬಗ್ಗೆ ಸಾಧ್ಯಂತವಾಗಿ ತಿಳಿಸಿ, ಹೂಡಿಕೆಗೆ ಅವಕಾಶವಿರುವ ಕ್ಷೇತ್ರಗಳತ್ತ ಗಮನಸೆಳೆಯಲಾಯಿತು. ಕೌಶಲ್ಯಾಭಿವೃದ್ಧಿಯಂಥ ನಿರ್ದಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿ ವರ್ಕಿಂಗ್ ಗ್ರೂಪ್ ರಚಿಸಲು ತೀರ್ಮಾನಿಸಲಾಯಿತು. ಬವೇರಿಯಾ ಪ್ರಾಂತ್ಯವು 2007ರಿಂದಲೂ ರಾಜ್ಯದೊಂದಿಗೆ ವಾಣಿಜ್ಯ ಸಂಬಂಧವನ್ನು ಹೊಂದಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬವೇರಿಯಾ ಪ್ರಾಂತೀಯ ಸರ್ಕಾರದ ಪ್ರತಿನಿಧಿ ಮಟ್ಟದ ಕಚೇರಿ 2001ರಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಈಗಿನ ಹೊಸ ಒಡಂಬಡಿಕೆಯಿಂದ ರಾಜ್ಯ ಮತ್ತು ಬವೇರಿಯಾ ನಡುವಿನ ಬಾಂಧವ್ಯ ಮತ್ತೊಂದು ಮಜಲನ್ನು ಕಾಣಲಿದೆ ಎಂದರು.

ವಿಜ್ಞಾನ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ 2013ರಿಂದಲೂ ದ್ವಿಪಕ್ಷೀಯ ಸಹಕಾರವಿದೆ. ಇನ್ನು ಮುಂದೆ ಬಾಹ್ಯಾಕಾಶ, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ವಲಯಗಳ ಬಗ್ಗೆ ಗಮನಹರಿಸಲು ಅವಕಾಶ ಹೆಚ್ಚಿದೆ ಎಂದು ಎಂ.ಬಿ.ಪಾಟೀಲ ತಿಳಿಸಿದರು.

ನವೋದ್ಯಮಗಳು ಸಮೃದ್ಧ

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದ ಐಟಿ-ಬಿಟಿ ಇಲಾಖೆಯು ನವೋದ್ಯಮ ಕ್ಷೇತ್ರದಲ್ಲಿ

ಜರ್ಮನಿಯೊಂದಿಗೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸಂಶೋಧನೆ, ಯೂನಿಕಾರ್ನ್ ಶ್ರೇಣಿಯ ನವೋದ್ಯಮಗಳು ಸಮೃದ್ಧವಾಗಿವೆ ಎಂದು ಹೇಳಿದರು.

ಯಾವುದಾದರೂ ವಲಯದಲ್ಲಿ ರಾಜ್ಯದ ಯುವಜನರು ಜರ್ಮನ್ ಭಾಷೆ ಕಲಿಯುವುದು ಅಗತ್ಯವೆನಿಸಿದರೆ ಅದಕ್ಕೂ ವ್ಯವಸ್ಥೆ ಮಾಡಲಾಗುವುದು. ಬವೇರಿಯಾ ಪ್ರಾಂತೀಯ ಸರ್ಕಾರವು ಈ ಬಗ್ಗೆ ನಮ್ಮ ಗಮನಕ್ಕೆ ತರಬಹುದು ಎಂದಿದ್ದಾರೆ.