ಚಂಡೀಗಢ: ಹರಿಯಾಣದ ನುಹ್ ಜಿಲ್ಲೆಯಲ್ಲಿ ಉಂಟಾಗಿರುವ ಕೋಮುಗಲಭೆ ನಿಯಂತ್ರಣಕ್ಕೆ ಬರುತ್ತಿರುವ ಸಮಯದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಪಾಕಿಸ್ತಾನ ಮೂಲದ ಯೂಟ್ಯೂಬರ್ ಭಾರತೀಯನ ಸೋಗಿನಲ್ಲಿ ನಾಲಿಗೆ ಹರಿಬಿಟ್ಟಿದ್ದಾನೆ.
ಕೋಮುಗಲಭೆ ವಿಚಾರವಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ಕಿಡಿ ಹೊತ್ತಿ ಉರಿಯುತ್ತಿದೆ. ಮೊನು ಮನೇಸರ್ ಮತ್ತು ಬಿಟ್ಟು ಬಜರಂಗಿ ಅವರ ಪ್ರಚೋದಾನಾತ್ಮಕ ವಿಡಿಯೋಗಳು ಹೊರತುಪಡಿಸಿ, ಇದೀಗ ಅಹ್ಸಾನ್ ಮೇವಾಟಿ ಎಂಬಾತನ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ತನ್ನ ವಿಡಿಯೋದಲ್ಲಿ ಮೋನು ಮನೇಸರ್ನನ್ನು ಕೊಲ್ಲುವಂತೆ ಮುಸ್ಲಿಮರಿಗೆ ಪ್ರಚೋದನೆ ನೀಡಿದ್ದಾನೆ. ಅಲ್ಲದೆ, ಹಿಂದು ವಿರೋಧಿ ಕಾಮೆಂಟ್‌ಗಳನ್ನು ಮಾಡಿರುವುದಲ್ಲದೆ, ಬೆದರಿಕೆಗಳನ್ನು ಹಾಕಿದ್ದಾನೆ.
ಅಂದಹಾಗೆ ಮೋಹಿತ್ ಯಾದವ್ ಅಥವಾ ಮೋನು ಮಾನೇಸರ್, ಸ್ವಯಂ ಘೋಷಿತ ಗೋರಕ್ಷಕ ಮತ್ತು ಈ ವರ್ಷದ ಆರಂಭದಲ್ಲಿ ಹರಿಯಾಣದ ಭಿವಾನಿಯಲ್ಲಿ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾರಿಗಳನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿದ್ದಾನೆ. ಸದ್ಯ ಮೋಹಿತ್ ಯಾದವ್ ತಲೆಮರೆಸಿಕೊಂಡಿದ್ದು, ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಆಯೋಜಿಸಿದ್ದ ಶೋಭಾ ಯಾತ್ರೆಗೆ ಒಂದು ದಿನ ಮುಂಚಿತವಾಗಿ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ, ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಘೋಷಿಸಿದ್ದರು. ಯಾತ್ರೆಯ ದಿನವಾದ ಜುಲೈ 31ರಂದು ಮೆರವಣಿಗೆಗೆ ಅನ್ಯಕೋಮಿನವರು ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ನುಹ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಭಾರತದಲ್ಲಿ ಕೋಮುದಳ್ಳುರಿಯಿಂದ ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದರೆ ಈ ಅಹ್ಸಾನ್ ಮೇವಾಟಿ ಹಿಂಸಾಚಾರವನ್ನು ಸಂಭ್ರಮಿಸುವ ಮೂಲಕ ವಿಕೃತಿ ಮೆರೆದಿದ್ದಾನೆ. ಇಷ್ಟೇ ಪ್ರಚೋದನಾತ್ಮಕವಾಗಿ ಮಾತನಾಡಿದರು ಹರಿಯಾಣ ಪೊಲೀಸರು ಮಾತ್ರ ಆತನನ್ನು ಏಕೆ ಬಂಧಿಸಿಲ್ಲ ಎಂದು ಅಲ್ಲಿನ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಗೋಮುಖ ವ್ಯಾಘ್ರ ಭಾರತದವನಲ್ಲ. ಬದಲಾಗಿ ಪಾಕಿಸ್ತಾನದ ಯೂಟ್ಯೂಬರ್ ಎಂಬುದನ್ನು ಇಂಡಿಯಾ ಟುಡೆ ಬಯಲಿಗೆ ಎಳೆದಿದೆ.
ತನ್ನ ಫೇಸ್‌ಬುಕ್ ಪೇಜ್ನಲ್ಲಿ ರಾಜಸ್ಥಾನದ ಅಲ್ವಾರ್ ಎಂದು ತನ್ನ ಸ್ಥಳದ ಮಾಹಿತಿಯನ್ನು ಅಹ್ಸಾನ್ ಉಲ್ಲೇಖಿಸಿದ್ದಾರೆ. ಈ ಕಾರಣದಿಂದ ಅನೇಕರು ಈತ ಭಾರತೀಯ ಎಂದು ನಂಬಿದ್ದಾರೆ. ಆದರೆ, ಅಸಲಿ ಸಂಗತಿಯೇ ಬೇರೆ ಇದೆ. ಏಕೆಂದರೆ, ಈತ ಭಾರತೀಯನಲ್ಲ. ಪಾಪಿ ಪಾಕಿಸ್ತಾನದ ಕ್ರಿಮಿ ಎಂಬುದು ಬಯಲಾಗಿದೆ. ಫೇಸ್‌ಬುಕ್ ಪ್ರೊಫೈಲ್ನಲ್ಲಿ ಆತನ ಲೊಕೇಶನ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಹ್ರೋರ್ ಪಕ್ಕಾ ಮೂಲದ ನಿವಾಸಿ ಎಂದು ತಿಳಿದುಬಂದಿದೆ.
ಅಹ್ಸಾನ್ ಮೇವಾಟಿ ಪಾಕಿಸ್ತಾನದ ಯೂಟ್ಯೂಬರ್ ಸಹ ಹೌದು. ಜುಲೈ 31ರಂದು ನುಹ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ದಿನವೇ ಈ ಅಹ್ಸಾನ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್ನಲ್ಲೂ ಕೂಡ ತನ್ನ ಸ್ಥಳವನ್ನು ಪಾಕಿಸ್ತಾನ ಎಂದು ಉಲ್ಲೇಖಿಸಿದ್ದಾನೆ.
ಇಂಡಿಯಾ ಟುಡೆ ಮಾಧ್ಯಮ ಅಹ್ಸಾನ್ ಮೇವಾಟಿಯನ್ನು ಸಂಪರ್ಕಿಸಿ ಮಾತನಾಡಿಸಿದ್ದು, ತಾನು ಪಾಕಿಸ್ತಾನದ ಮೇವಾಟ್ ವಲಯದವನು ಎಂದಿದ್ದಾನೆ. ತಾನೆಂದು ಭಾರತಕ್ಕೆ ಭೇಟಿಯನ್ನೇ ನೀಡಿಲ್ಲ ಎಂದಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಮೇವಾತ್ ಎಂಬ ಸ್ಥಳವಿಲ್ಲ. ಭಾರತ ಮತ್ತು ಪಾಕ್ ವಿಭಜನೆಯ ಸಮಯದಲ್ಲಿ ಅವಿಭಜಿತ ಮೇವಾತ್‌ನ ಕೆಲವು ಪ್ರದೇಶಗಳು ಪಾಕಿಸ್ತಾನಕ್ಕೆ ಹೋದವು ಮತ್ತು ಅಲ್ಲಿ ವಾಸಿಸುವ ಜನರು ಈಗಲೂ ತಮ್ಮನ್ನು 'ಮೇವಾಟಿ' ಎಂದು ಗುರುತಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಅಹ್ಸಾನ್ನನ್ನು ರಾಜಸ್ಥಾನದ ಸಂಪರ್ಕದ ಬಗ್ಗೆ ಕೇಳಲಾಯಿತು. ಅವರ ಪೂರ್ವಜರು ರಾಜಸ್ಥಾನದ ಅಲ್ವಾರ್‌ನಿಂದ ಪಾಕಿಸ್ತಾನಕ್ಕೆ ವಲಸೆ ಬಂದಿರುವುದಾಗಿ ಹೇಳಿದನು. ಅಹ್ಸಾನ್ ಸಹೋದರ ಪಾಕಿಸ್ತಾನದ ಪೊಲೀಸ್ ಅಧಿಕಾರಿಯಾಗಿದ್ದಾರೆ ಎಂಬುದನ್ನು ಆತನ ಫೇಸ್‌ಬುಕ್ ಪ್ರೊಫೈಲ್ ಖಚಿತಪಡಿಸಿದೆ ಮತ್ತು ಅಹ್ಸನ್ ಸಹ ಇದನ್ನು ಖಚಿತಪಡಿಸಿದ್ದಾನೆ. ಪಾಕಿಸ್ತಾನದ ಬಹವಾಲ್‌ಪುರದ ಚಂಬ್ ಮೋರ್ ಎಂಬ ಹಳ್ಳಿಯಲ್ಲಿ ವಾಸವಿರುವುದಾಗಿ ಅಹ್ಸಾನ್ ಮೇವಾಟಿ ಇಂಡಿಯಾ ಟುಡೆಗೆ ತಿಳಿಸಿದ್ದಾನೆ.
ಆತನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್ನಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಿದ್ದರೂ ಕರೆ ಮಾಡಿದರೆ ಆತ ಪ್ರತಿಕ್ರಿಯಿಸಲಿಲ್ಲ. ಆದಾಗ್ಯೂ, ಆತನ ಹಲವಾರು ಯೂಟ್ಯೂಬ್ ವಿಡಿಯೋಗಳಲ್ಲಿ, ಪಾಕಿಸ್ತಾನಿ ಫೋನ್ ಸಂಖ್ಯೆಗಳನ್ನು ಬರೆದಿರುವ ಉರ್ದು ಬೋರ್ಡ್‌ಗಳನ್ನು ಗಮನಿಸಿ, ಆ ಸಂಖ್ಯೆಗಳ ಮೂಲಕ, ಕೆಲವು ಸ್ಥಳೀಯರೊಂದಿಗೆ ಮಾತನಾಡಿ, ಅಂತಿಮವಾಗಿ ಅಹ್ಸಾನ್ ಅನ್ನು ಇಂಡಿಯಾ ಟುಡೆ ಸಂಪರ್ಕಿಸಿದೆ.
ಅಹ್ಸಾನ್, ಯೂಟ್ಯೂಬರ್ ಮತ್ತು ಕೃಷಿಕ ಎಂದು ತಿಳಿಸಿದ್ದು, ಆತನ ಸಾಮಾಜಿಕ ಜಾಲತಾಣ ಪ್ರೊಫೈಲ್‌ಗಳು ಆತ ಮಧ್ಯಮ ಜನಪ್ರಿಯ ಯೂಟ್ಯೂಬರ್ ಎಂದು ತೋರಿಸುತ್ತವೆ. ಆಗಸ್ಟ್ 3 ರ ಹೊತ್ತಿಗೆ, ಆತನ ಯೂಟ್ಯೂಬ್ ಚಾನೆಲ್ನಲ್ಲಿ 80,000 ಕ್ಕೂ ಹೆಚ್ಚು ಚಂದಾದಾರರನ್ನು ಮತ್ತು ಫೇಸ್‌ಬುಕ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾನೆ. ಆತನ ಹೆಚ್ಚಿನ ವಿಷಯವು 'ಮೇವಾತ್' ಗೆ ಸಂಬಂಧಿಸಿದೆ. ಆತ ಹಳ್ಳಿಯ ಜೀವನ ಮತ್ತು 'ಮೇವಾಟಿ ಸಂಸ್ಕೃತಿ' ಕುರಿತು ಅನೇಕ ವಿಡಿಯೋಗಳನ್ನು ಮಾಡಿದ್ದಾನೆ. ಆದಾಗ್ಯೂ, ಕಳೆದ ಕೆಲವು ತಿಂಗಳುಗಳಲ್ಲಿ, ಆತ ಭಾರತದಲ್ಲಿನ ಮೇವಾತ್‌ಗೆ (ಅಧಿಕೃತವಾಗಿ ನುಹ್ ಜಿಲ್ಲೆ ಎಂದು ಕರೆಯುತ್ತಾರೆ) ಸಂಬಂಧಿಸಿದ ಕೋಮು ಸೂಕ್ಷ್ಮ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದ್ದಾನೆ. ಅದಕ್ಕೂ ಮುನ್ನ ಕಣ್ಣಿಗೆ ಮಣ್ಣೆರಚಲು ಅಸಭ್ಯ ವಿಷಯವನ್ನು ಅಪ್ಲೋಡ್ ಮಾಡುತ್ತಿದ್ದಾನೆ. ತನ್ನ ಪೂರ್ವಜರು ಅವಿಭಜಿತ ಮೇವಾತ್‌ನಿಂದ ಬಂದವರು ಎಂದು ಅಹ್ಸನ್ ಹೇಳಿದ್ದಾನೆ. ಮೇವಾತ್‌ಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾನೆ. ಆದ್ದರಿಂದ, ನುಹ್‌ನಲ್ಲಿ ಹಿಂಸಾಚಾರ ಪ್ರಾರಂಭವಾದಾಗ, ಹೆಚ್ಚಿನ ಅನುಯಾಯಿಗಳನ್ನು ಪಡೆಯುವ ದುರುದ್ದೇಶದಿಂದ ಹಿಂಸಾಚಾರದ ವಿಷಯದ ಕುರಿತು ವಿಡಿಯೋಗಳನ್ನು ಮಾಡಲು ಆತ ಪ್ರಾರಂಭಿಸಿದ್ದಾನೆ. ಆತನ ವಿಡಿಯೋಗಳ ಕಾಮೆಂಟ್‌ಗಳನ್ನು ನೋಡಿದರೆ ಅನೇಕ ಭಾರತೀಯರು ಆತನ ವಿಡಿಯೋಗಳನ್ನು ಗಮನಿಸಿದ್ದಾರೆ. ಆತನ ಬಹಳಷ್ಟು ವಿಡಿಯೋಗಳು ದೇವನಾಗರಿ ಲಿಪಿಯಲ್ಲಿ ಹಿಂದಿಯಲ್ಲಿ ಬರೆಯಲ್ಪಟ್ಟ ಶೀರ್ಷಿಕೆಗಳನ್ನು ಹೊಂದಿರುವುದರಿಂದ ಭಾರತೀಯರು ಕೂಡ ವಿಡಿಯೋಗಳನ್ನು ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್)