ನ್ಯೂಸ್

ಜಾತಿ ಗಣತಿ ವರದಿ ಬಿಡುಗಡೆಗೆ ‘ಅಹಿಂದ’ ಒತ್ತಾಯ

ಬೆಂಗಳೂರು: ಜನಗಣತಿಯಲ್ಲಿ ಜಾತಿ ಕಲಂ ಹಾಗೂ ಉಪ ಜಾತಿ ಕಲಂ ಸೇರಿಸಬೇಕೆಂದು ಅಹಿಂದ ಸಂಘಟನೆಯು ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮೀಷನರ್ ಅವರನ್ನು ಒತ್ತಾಯಿಸಿ ಪತ್ರ ಬರೆದಿದೆ. ಜತೆಗೆ ಕಾಂತರಾಜು ಆಯೋಗ ಸಿದ್ಧಪಡಿಸಿರುವ ಜಾತಿ ಗಣತಿ ವರದಿಯನ್ನು ತಡಮಾಡದೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರನ್ನು ಆಗ್ರಹಿಸಿದೆ.

ಸರ್ಕಾರವು ಸೌಲಭ್ಯ ಕಲ್ಪಿಸಲು ಜಾತಿವಾರು ಮಾಹಿತಿ ಅವಶ್ಯಕ. ಹೀಗಾಗಿ ಮುಂಬರುವ ಗಣತಿ ಸಂದರ್ಭದಲ್ಲಿ ಬಳಕೆ ಮಾಡುವ ದಾಖಲೆ ಪತ್ರದಲ್ಲಿ ಜಾತಿ ಹಾಗೂ ಉಪ ಜಾತಿ ಕಲಂ ಅಳವಡಿಸುವಂತೆ ಅಹಿಂದ ಸಂಘಟನೆ ಆಗ್ರಹಿಸಿದೆ.

ಅದೇ ರೀತಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ) ಬಹಿರಂಗವಾಗಬೇಕು. ಸಮ ಸಮಾಜ ನಿರ್ಮಾಣಕ್ಕಾಗಿ ಪ್ರತಿ ಜಾತಿ ಧರ್ಮಗಳ ಜನ ಸಾಂಧ್ರತೆಗಳ ವಾಸ್ತವ ಅಂಕಿ ಅಂಶ ತಿಳಿಯಬೇಕಿದೆ. ಹೀಗಾಗಿ ಕೂಡಲೇ ವರದಿ ಬಹಿರಂಗ ಪಡಿಸಿ ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲಾಗಿದೆ ಎಂದು ಅಹಿಂದ ಚಳವಳಿ ರಾಜ್ಯ ಮುಖ್ಯ ಸಂಚಾಲಕ ಎಸ್.ಮೂರ್ತಿ ತಿಳಿಸಿದ್ದಾರೆ.